
ಆಕ್ಲೆಂಡ್‌ನಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಕಿವೀಸ್ ಪಡೆ ಪಾಕ್ ತಂಡವನ್ನು 46 ರನ್ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

ಈ ಪಂದ್ಯದಲ್ಲಿ ಕಿವೀಸ್ ಪರ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಡೇರೆಲ್ ಮಿಚೆಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ತಲಾ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು 226 ರನ್ಗಳಿಗೆ ಕೊಂಡೊಯ್ದರೆ, ಬೌಲಿಂಗ್ನಲ್ಲಿ ಮಿಂಚಿದ ಟಿಮ್ ಸೌಥಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಸೌಥಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆದರು. ಸೌಥಿ ದಾಳಿಗೆ ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಅಬ್ಬಾಸ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ರಂತಹ ಆಟಗಾರರು ಸೈಲೆಂಟಾಗಿ ಪೆವಿಲಿಯನ್ ಸೇರಿಕೊಂಡರು.

ಈ 4 ವಿಕೆಟ್ಗಳ ಬೇಟೆಯೊಂದಿಗೆ ಸೌಥಿ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆಯನ್ನು ಮಾಡಿದರು. ಅದೆನೆಂದರೆ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಸೌಥಿ ಪಾತ್ರರಾಗಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಸೌಥಿ ನಂತರದ ಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಆಡಿರುವ 117 ಪಂದ್ಯಗಳಿಂದ 140 ವಿಕೆಟ್ ಕಬಳಿಸಿದ್ದಾರೆ.

ಈ ಇಬ್ಬರ ನಂತರ 82 ಪಂದ್ಯಗಳಲ್ಲಿ 130 ವಿಕೆಟ್, 106 ಪಂದ್ಯಗಳಲ್ಲಿ 127 ವಿಕೆಟ್, 84 ಪಂದ್ಯಗಳಲ್ಲಿ 107 ವಿಕೆಟ್ ಪಡೆದಿರುವ ರಶೀದ್ ಖಾನ್, ಇಶ್ ಸೋಧಿ, ಲಸಿತ್ ಮಾಲಿಂಗ ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿದ್ದಾರೆ.

2008 ರಲ್ಲಿ ಕಿವೀಸ್ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಸೌಥಿ ಇಲ್ಲಿಯವರೆಗೆ ಒಟ್ಟು 118 ಪಂದ್ಯಗಳನ್ನು ಆಡಿದ್ದಾರೆ. ಏತನ್ಮಧ್ಯೆ, ಅವರು 115 ಇನ್ನಿಂಗ್ಸ್‌ಗಳಲ್ಲಿ 22.96 ಸರಾಸರಿಯಲ್ಲಿ 151 ವಿಕೆಟ್ ಉರುಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 18 ರನ್ ನೀಡಿ ಐದು ವಿಕೆಟ್ ಪಡೆದಿರುವುದು ಸೌಥಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.