ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ವಿಶ್ವದ ಯಾವುದೇ ಆಟಗಾರ ಬರೆಯದ ದಾಖಲೆ ಎಂಬುದು ವಿಶೇಷ.
ಹೌದು, ಅಫ್ಘಾನಿಸ್ತಾನ್ ವಿರುದ್ಧದ ಜಯದೊಂದಿಗೆ ರೋಹಿತ್ ಶರ್ಮಾ ಭಾರತದ ಪರ 100 ಟಿ20 ಪಂದ್ಯಗಳ ಗೆಲುವು ದಾಖಲಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ನೂರು ಟಿ20 ಪಂದ್ಯಗಳ ಗೆಲುವಿನ ಭಾಗವಾಗಿರುವ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ಹಿಟ್ಮ್ಯಾನ್ ಬರೆದಿದ್ದಾರೆ.
ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಪಾಕಿಸ್ತಾನ್ ತಂಡದ ಶೊಯೇಬ್ ಮಲಿಕ್. ಪಾಕ್ ಪರ 124 ಪಂದ್ಯಗಳನ್ನಾಡಿರುವ ಮಲಿಕ್ 86 ಮ್ಯಾಚ್ಗಳಲ್ಲಿ ಗೆಲುವಿನ ಭಾಗವಾಗಿದ್ದಾರೆ.
ಇದೀಗ ಟೀಮ್ ಇಂಡಿಯಾ ಪರ ಒಟ್ಟು 149 ಟಿ20 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 100 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನು ರಚಿಸಿದ್ದಾರೆ.
ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್ನಲ್ಲಿ ನಾಯಕನಾಗಿ ಇದು ರೋಹಿತ್ ಶರ್ಮಾ ಅವರ 40ನೇ ಗೆಲುವು. ಈ ಮೂಲಕ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯಲ್ಲಿ ಹಿಟ್ಮ್ಯಾನ್ 5ನೇ ಸ್ಥಾನಕ್ಕೇರಿದ್ದಾರೆ.
ಒಂದು ವೇಳೆ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದರೆ, ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ನಾಯಕನ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಲಿದ್ದಾರೆ.
ಈ ಪಟ್ಟಿಯಲ್ಲಿ 42 ಗೆಲುವು ದಾಖಲಿಸಿರುವ ಇಂಗ್ಲೆಂಡ್ನ ಮಾಜಿ ನಾಯಕ ಇಯಾನ್ ಮೋರ್ಗನ್ ಹಾಗೂ ಅಫ್ಘಾನಿಸ್ತಾನ್ ತಂಡದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಜಂಟಿಯಾಗಿ ಅಗ್ರಸ್ಥಾನಗಳಲ್ಲಿದ್ದಾರೆ. ಇದೀಗ ಈ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನು ಕೇವಲ 2 ಗೆಲುವುಗಳ ಅವಶ್ಯಕತೆಯಿದೆ. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ನಾಯಕನಾಗಿಯೂ ರೋಹಿತ್ ಶರ್ಮಾ ಹೊಸ ದಾಖಲೆ ಬರೆಯಬಹುದು.
Published On - 6:53 am, Sat, 13 January 24