
ಪರ್ತ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಮಳೆಬಾಧಿತ ಊ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 26 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 136 ರನ್ಗಳು ಮಾತ್ರ.

ಅತ್ತ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 26 ಓವರ್ಗಳಲ್ಲಿ 131 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು 21.1 ಓವರ್ಗಳಲ್ಲಿ ಗುರಿ ತಲುಪಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

ವಿಶೇಷ ಎಂದರೆ ಈ ಗೆಲುವು ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ಬಲಿಷ್ಠತೆಯನ್ನು ಎತ್ತಿ ತೋರಿಸಿದೆ. ಏಕೆಂದರೆ 2023 ರ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೇವಲ ನಾಲ್ವರು ಆಟಗಾರರು ಮಾತ್ರ ಮೊದಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅಂದರೆ ಚಾಂಪಿಯನ್ಸ್ ತಂಡದ ಬಹುತೇಕ ಆಟಗಾರರು ಮೊದಲ ಮ್ಯಾಚ್ಗೆ ಅಲಭ್ಯರಾಗಿದ್ದರು.

2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ವಿರುದ್ಧ ಆಡಿದ್ದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್ವುಡ್, ಟ್ರಾವಿಡ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಮಾತ್ರ ಈ ಬಾರಿಯ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಟೀಮ್ ಇಂಡಿಯಾಗೆ ಅನಾನುಭವಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

ಅದರಲ್ಲೂ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಲಾಬುಶೇನ್, ಆ್ಯಡಂ ಝಂಪಾನಂತಹ ಅನುಭವಿ ಆಟಗಾರರ ಅನುಪಸ್ಥಿತಿಯ ನಡುವೆಯೂ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮತ್ತೊಮ್ಮೆ ತನ್ನ ಬಲಿಷ್ಠತೆಯನ್ನು ತೆರೆದಿಟ್ಟಿದೆ.

2023ರ ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಡೇವಿಡ್ ವಾರ್ನರ್ , ಮಿಚೆಲ್ ಮಾರ್ಷ್ , ಸ್ಟೀವ್ ಸ್ಮಿತ್ , ಮಾರ್ನಸ್ ಲಾಬುಶೇನ್ , ಗ್ಲೆನ್ ಮ್ಯಾಕ್ಸ್‌ವೆಲ್ , ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಆ್ಯಡಂ ಝಂಪಾ , ಜೋಶ್ ಹೇಝಲ್ವುಡ್.

ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದ ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕೊನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹೇಝಲ್ವುಡ್.