- Kannada News Photo gallery Cricket photos Deepti Sharma's Historic ODI Feat: 2000 Runs & 150 Wickets in Women's Cricket
World Cup 2025: ಈ ಐತಿಹಾಸಿಕ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ದೀಪ್ತಿ ಶರ್ಮಾ
Deepti Sharma achievement: ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 2000 ರನ್ ಮತ್ತು 150 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಮತ್ತು ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಮಾಡಿದರು. ಜೂಲನ್ ಗೋಸ್ವಾಮಿ ನಂತರ 150+ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆಗಿ, ದೀಪ್ತಿ ಮಹಿಳಾ ಕ್ರಿಕೆಟ್‌ಗೆ ಹೊಸ ಅಧ್ಯಾಯ ಬರೆದಿದ್ದಾರೆ.
Updated on: Oct 19, 2025 | 10:07 PM

ಭಾರತದ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಭಾನುವಾರ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ ಕಬಳಿಸಿದರು. ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರು 10 ಓವರ್‌ಗಳಲ್ಲಿ 51 ರನ್‌ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರು. ಈ ಮೂಲಕ ಈ ಪಂದ್ಯದಲ್ಲಿ ಭಾರತದ ಪರ ಅತ್ಯಧಿಕ ವಿಕೆಟ್ ಪಡೆದು ಆಂಗ್ಲ ತಂಡವನ್ನು ಬೃಹತ್ ಮೊತ್ತ ಕಲೆಹಾಕದಂತೆ ತಡೆದರು.

ಈ ಪಂದ್ಯದಲ್ಲಿ ದೀಪ್ತಿ ಆರಂಭಿಕ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಾಂಟ್ (22), ಆಮಿ ಜೋನ್ಸ್ (56), ಎಮ್ಮಾ ಲ್ಯಾಂಬ್ (11), ಮತ್ತು ಆಲಿಸ್ ಕ್ಯಾಪ್ಸೆ (2) ಅವರನ್ನು ಔಟ್ ಮಾಡಿದರು. ಈ ಮೂಲಕ 28 ವರ್ಷದ ದೀಪ್ತಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಕೂಡ ಸೃಷ್ಟಿಸಿದ್ದಾರೆ.

ವಾಸ್ತವವಾಗಿ ದೀಪ್ತಿ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 2,000 ರನ್‌ಗಳನ್ನು ಗಳಿಸುವುದರ ಜೊತೆಗೆ 150 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಮತ್ತು ವಿಶ್ವದ ನಾಲ್ಕನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇಲ್ಲಿಯವರೆಗೆ ಏಕದಿನ ಪಂದ್ಯಗಳಲ್ಲಿ 2,600 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ದೀಪ್ತಿ ಶರ್ಮಾಗಿಂತ ಮೊದಲು ಆಸ್ಟ್ರೇಲಿಯಾದ ಎಲಿಸ್ ಪೆರ್ರಿ (4,414 ರನ್‌ಗಳು, 166 ವಿಕೆಟ್‌ಗಳು), ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್ (5,873 ರನ್‌ಗಳು, 155 ವಿಕೆಟ್‌ಗಳು), ಮತ್ತು ದಕ್ಷಿಣ ಆಫ್ರಿಕಾದ ಮರಿಜಾನ್ನೆ ಕಪ್ (3,397 ರನ್‌ಗಳು, 172 ವಿಕೆಟ್‌ಗಳು) ಈ ಸಾಧನೆ ಮಾಡಿದ್ದಾರೆ.

ದೀಪ್ತಿ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಏಕದಿನ ಪಂದ್ಯಗಳಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಆಗಿದ್ದಾರೆ. ಇದಕ್ಕೂ ಮೊದಲು, ಜೂಲನ್ ಗೋಸ್ವಾಮಿ 204 ಪಂದ್ಯಗಳಲ್ಲಿ 255 ವಿಕೆಟ್‌ಗಳನ್ನು ಪಡೆದಿದ್ದರು. ಜೂಲನ್ ನಂತರ ಈ ಮೈಲಿಗಲ್ಲು ಸಾಧಿಸುವ ಮೂಲಕ, ದೀಪ್ತಿ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ.
