
ಬರೋಬ್ಬರಿ 22 ವರ್ಷಗಳ ಬಳಿಕ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಪರಾಕ್ರಮ ಮೆರೆದಿದೆ. ಅದು ಕೂಡ ಕಾಂಗರೂ ನಾಡಿನಲ್ಲಿ ಆಸೀಸ್ ಪಡೆಯನ್ನು 2-1 ಅಂತರದಿಂದ ಮಣಿಸಿ ಏಕದಿನ ಸರಣಿ ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದು ಬರೋಬ್ಬರಿ 22 ವರ್ಷಗಳಾಗಿತ್ತು.

ಆದರೆ ಈ ಬಾರಿ ಮೊಹಮ್ಮದ್ ರಿಝ್ವಾನ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಆತಿಥೇಯರನ್ನು ಬಗ್ಗು ಬಡಿದು 2 ದಶಕಗಳ ಬಳಿಕ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಆಸೀಸ್ ಪಿಚ್ನಲ್ಲಿ ಸರಣಿ ಗೆಲ್ಲುವ ಪಾಕ್ ತಂಡದ 22 ವರ್ಷಗಳ ಕಾಯುವಿಕೆ ಕೂಡ ಕೊನೆಗೊಂಡಿದೆ.

ಇನ್ನು ಪರ್ತ್ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಪಾಕ್ ವೇಗಿಗಳ ಕರಾರುವಾಕ್ ದಾಳಿ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಆಸ್ಟ್ರೇಲಿಯಾ 31.5 ಓವರ್ಗಳಲ್ಲಿ ಕೇವಲ 140 ರನ್ಗಳಿಸಿ ಆಲೌಟ್ ಆಯಿತು.

141 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಆರಂಭಿಕರಾದ ಸೈಮ್ ಅಯ್ಯೂಬ್ ಹಾಗೂ ಅಬ್ದುಲ್ಲಾ ಶಫೀಕ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 84 ರನ್ಗಳ ಜೊತೆಯಾಟವಾಡಿದ ಬಳಿಕ ಅಬ್ದುಲ್ಲಾ ಶಫೀಕ್ (37) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸೈಮ್ ಅಯ್ಯೂಬ್ (42) ಕೂಡ ಔಟಾದರು. ಅಂತಿಮವಾಗಿ ಪಾಕ್ ತಂಡವು 26.5 ಓವರ್ಗಳಲ್ಲಿ 143 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಈ ಮೂಲಕ 22 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವಲ್ಲಿ ಪಾಕಿಸ್ತಾನ್ ತಂಡ ಯಶಸ್ವಿಯಾಗಿದೆ. ಇದಕ್ಕೂ ಮುನ್ನ 2002 ರಲ್ಲಿ ವಾಕರ್ ಯೂನಿಸ್ ನೇತೃತ್ವದ ಪಾಕ್ ಪಡೆ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಿಂದ ಏಕದಿನ ಸರಣಿ ಗೆದ್ದುಕೊಂಡಿತ್ತು. ಇದಾದ ಬಳಿಕ ಒಮ್ಮೆಯೂ ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾದಲ್ಲಿ ಸರಣಿ ಜಯಿಸಿರಲಿಲ್ಲ. ಇದೀಗ ಇತಿಹಾಸ ಪುನರಾವರ್ತಿಸುವಲ್ಲಿ ಮೊಹಮ್ಮದ್ ರಿಝ್ವಾನ್ ಪಡೆ ಯಶಸ್ವಿಯಾಗಿದೆ.