- Kannada News Photo gallery Cricket photos Champions Trophy 2025: India will not travel to Pakistan, PCB have 3 Options
Champions Trophy 2025: ಭಾರತ ಬರಲ್ಲ… ಪಾಕಿಸ್ತಾನ್ ಮುಂದಿರುವ ಆಯ್ಕೆಗಳಾವುವು?
Champions Trophy 2025: 2008 ರಿಂದ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಕಳೆದ 12 ವರ್ಷಗಳಲ್ಲಿ ಉಭಯ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಯನ್ನು ಸಹ ಆಡಿಲ್ಲ. ಇದೀಗ ಐಸಿಸಿ ಟೂರ್ನಿಗೆ ಪಾಕಿಸ್ತಾನ್ ಆತಿಥ್ಯವಹಿಸಲು ಸಜ್ಜಾಗಿದೆ. ಆದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಟೀಮ್ ಇಂಡಿಯಾ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದೆ.
Updated on: Nov 10, 2024 | 12:31 PM

ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದು, ಹೀಗಾಗಿ ಟೀಮ್ ಇಂಡಿಯಾ ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲ್ಲ ಎಂದು ಬಿಸಿಸಿಐ, ಐಸಿಸಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಇದರೊಂದಿಗೆ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಹೊಂದಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ. ಏಕೆಂದರೆ ಭಾರತ ತಂಡವು ಟೂರ್ನಿಯಿಂದ ಹೊರಗುಳಿದರೆ, ಪಿಸಿಬಿ ಹಾಗೂ ಐಸಿಸಿಗೆ ದೊಡ್ಡ ನಷ್ಟವುಂಟಾಗಲಿದೆ. ಹೀಗಾಗಿ ಐಸಿಸಿ ಪರ್ಯಾಯ ಆಯ್ಕೆಗಳನ್ನು ಬಿಸಿಸಿಐ ಮುಂದಿಡಲು ಪಾಕ್ ಕ್ರಿಕೆಟ್ ಮಂಡಳಿಗೆ ಸೂಚಿಸಬಹುದು. ಅದರಂತೆ ಪಿಸಿಬಿ ಮುಂದಿರುವ ಆಯ್ಕೆಗಳಾವುವು ಎಂದು ನೋಡುವುದಾದರೆ...

ಹೈಬ್ರಿಡ್ ಮಾದರಿ: ಭಾರತ ತಂಡವು ಪಾಕ್ಗೆ ತೆರಳದಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಬಹುದು. ಇಲ್ಲಿ ಭಾರತದ ಪಂದ್ಯಗಳು ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಯಲಿದೆ. ಉಳಿದೆಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ. ಒಂದು ವೇಳೆ ಭಾರತ ತಂಡ ಫೈನಲ್ಗೆ ಪ್ರವೇಶಿಸಿದರೆ ಫೈನಲ್ ಕೂಡ ಶ್ರೀಲಂಕಾ ಅಥವಾ ಯುಎಇ ನಲ್ಲಿ ಜರುಗಲಿದೆ.

ಕಮ್ ಅ್ಯಂಡ್ ಗೋ ಆಯ್ಕೆ: ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಂದಿರುವ ಎರಡನೇ ಆಯ್ಕೆ ಕಮ್ ಅ್ಯಂಡ್ ಗೋ. ಅಂದರೆ ಪ್ರತಿ ಪಂದ್ಯಕ್ಕೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ತೆರಳಿ, ಮ್ಯಾಚ್ ಮುಗಿದ ಬಳಿಕ ಭಾರತಕ್ಕೆ ಹಿಂತಿರುಗುವ ಅವಕಾಶ. ಇದಕ್ಕಾಗಿ ಭಾರತ ತಂಡದ ಪಂದ್ಯಗಳನ್ನು ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ಆಯೋಜಿಸುವುದಾಗಿಯೂ ಪಾಕ್ ಕ್ರಿಕೆಟ್ ಮಂಡಳಿ ಈಗಾಗಲೇ ತಿಳಿಸಿದೆ.

ಏಕೆಂದರೆ ಲಾಹೋರ್ ನಗರವು ಭಾರತದ ಗಡಿಗೆ ಹತ್ತಿರದಲ್ಲಿದೆ. ಅದರಲ್ಲೂ ಪಂಜಾಬ್ನ ಚಂಡೀಗಢ ಹಾಗೂ ಲಾಹೋರ್ ನಡುವಣ ದೂರ ಕೇವಲ 246 ಕಿಲೋ ಮೀಟರ್ಗಳು ಮಾತ್ರ. ಅಲ್ಲದೆ ಲಾಹೋರ್ ಹಾಗೂ ಚಂಡೀಗಢ ನಗರಗಳಲ್ಲಿ ವಿಮಾನ ನಿಲ್ದಾಣಗಳಿವೆ. ಹೀಗಾಗಿ ಭಾರತದ ಪಂದ್ಯಗಳನ್ನು ಲಾಹೋರ್ನಲ್ಲಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅದರಂತೆ ಭಾರತ ತಂಡವು ತನ್ನ ಪಂದ್ಯಗಳಿಗೆ ನೇರವಾಗಿ ಲಾಹೋರ್ಗೆ ಆಗಮಿಸಿ, ಮ್ಯಾಚ್ ಮುಗಿದ ಬಳಿಕ ಚಂಡೀಗಢ ಅಥವಾ ದೆಹಲಿಗೆ ಹಿಂತಿರುಗಬಹುದು ಎಂದು ಪಿಸಿಬಿ ತಿಳಿಸಿದೆ.

ಭಾರತವನ್ನು ಹೊರಗಿಡುವುದು: ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಂದಿರುವ ಮೂರನೇ ಆಯ್ಕೆ ಭಾರತ ತಂಡವನ್ನು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗಿಡುವುದು. ಇಲ್ಲಿ ಟೀಮ್ ಇಂಡಿಯಾವನ್ನು ಟೂರ್ನಿಯಿಂದ ಕೈ ಬಿಟ್ಟು ಬೇರೊಂದು ತಂಡಕ್ಕೆ ಅವಕಾಶ ನೀಡುವ ಆಯ್ಕೆ ಕೂಡ ಪಿಸಿಬಿ ಮುಂದಿದೆ. ಆದರೆ ಇಂತಹದೊಂದು ಕಠಿಣ ನಿರ್ಧಾರ ತೆಗೆದುಕೊಂಡರೆ, ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಅಲ್ಲದೆ ಐಸಿಸಿ ಕೂಡ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಬಹುದು. ಏಕೆಂದರೆ ಐಸಿಸಿಯ ಅಧ್ಯಕ್ಷ ಜಯ್ ಶಾ. ಹೀಗಾಗಿ ಭಾರತ ತಂಡವನ್ನು ಹೊರಗಿಟ್ಟು ಚಾಂಪಿಯನ್ಸ್ ಟ್ರೋಫಿ ಆಯೋಜನೆ ಅಸಾಧ್ಯ ಎನ್ನಬಹುದು.

ಸದ್ಯ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಂದೆ ಮೂರು ಆಯ್ಕೆಗಳಿದ್ದು, ಇದರಲ್ಲಿ ಬಿಸಿಸಿಐ ಯಾವುದನ್ನು ಆಯ್ಕೆ ಮಾಡಲಿದೆ ಎಂಬುದೇ ಈಗ ಕುತೂಹಲ.
