WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸುತ್ತೆ..!
Team India: ನ್ಯೂಝಿಲೆಂಡ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಸೋತಿರುವ ಟೀಮ್ ಇಂಡಿಯಾ ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಅಮೋಘ ಗೆಲುವು ಸಾಧಿಸಿದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.
Updated on:Nov 10, 2024 | 10:54 AM

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ಟೀಮ್ ಇಂಡಿಯಾಗೆ ಉಳಿದಿರುವುದು ಒಂದೇ ಅವಕಾಶ. ಈ ಒಂದು ಅವಕಾಶದೊಂದಿಗೆ ಹಲವು ಆಯ್ಕೆಗಳಿವೆ. ಅಂದರೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಮೋಘ ಗೆಲುವು ಸಾಧಿಸಿದರೆ ಮಾತ್ರ ನೇರವಾಗಿ ಫೈನಲ್ಗೆ ಪ್ರವೇಶಿಸಬಹುದು. ಇದರ ಹೊರತಾಗಿ ಭಾರತದ ಮುಂದಿರುವ ಆಯ್ಕೆಗಳಾವುವು ಎಂದು ನೋಡುವುದಾದರೆ...

5-0 ಅಥವಾ 4-0: ಭಾರತ ತಂಡವು ಆಸ್ಟ್ರೇಲಿಯಾವನ್ನು 5-0 ಅಥವಾ 4-0 ಅಂತರದಿಂದ ಮಣಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡುವುದು ಖಚಿತವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪಂದ್ಯವನ್ನು ಸೋಲಬಾರದು. ಅಂದರೆ 5 ಮ್ಯಾಚ್ಗಳ ಸರಣಿಯಲ್ಲಿ 4 ಜಯ ಹಾಗು 1 ಡ್ರಾ ಸಾಧಿಸುವುದು ಅನಿವಾರ್ಯ. ಒಂದು ವೇಳೆ ಸೋತರೆ...

4-1, 3-1, 3-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ ಅಥವಾ 3-1, 3-0 ಅಂತರದಿಂದ ಜಯ ಸಾಧಿಸಿದರೆ, ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಇಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ 4-1, 3-1, 3-0 ಅಂತರದಿಂದ ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲಿದೆ.

2-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸಿ, 3 ಮ್ಯಾಚ್ಗಳನ್ನು ಡ್ರಾ ಮಾಡಿಕೊಂಡರೂ, ಫೈನಲ್ ಪ್ರವೇಶಿಸಲು ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ. ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಜಯ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ. ಇದರಿಂದ ಕಿವೀಸ್ ಪಡೆಯನ್ನು ಹಿಂದಿಕ್ಕಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.

3-2: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಜಯ ಸಾಧಿಸಿದರೆ, ಎರಡು ತಂಡಗಳ ಫಲಿತಾಂಶ ನಿರ್ಣಾಯಕವಾಗಲಿದೆ. ಅಂದರೆ ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಬೇಕು. ಹಾಗೆಯೇ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ನಲ್ಲಿ ಡ್ರಾ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ.

2-1, 1-1, 1-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಅಥವಾ 1-0 ಅಂತರದಿಂದ ಸರಣಿ ಗೆದ್ದರೆ ಅಥವಾ 1-1 ಅಂತರದಿಂದ ಸರಣಿಯನ್ನು ಡ್ರಾ ಮಾಡಿಕೊಂಡರೆ, ನ್ಯೂಝಿಲೆಂಡ್ ಇಂಗ್ಲೆಂಡ್ ವಿರುದ್ಧ ಕೇವಲ 1 ಟೆಸ್ಟ್ ಪಂದ್ಯದಲ್ಲಿ ಮಾತ್ರ ಗೆಲ್ಲುವುದನ್ನು ಎದುರು ನೋಡಬೇಕು. ಹಾಗೆಯೇ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ನಲ್ಲಿ ಡ್ರಾ ಸಾಧಿಸುವುದು ಭಾರತದ ಪಾಲಿಗೆ ಅನಿವಾರ್ಯ.

2-2: ಒಂದು ವೇಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯು 2-2 ಅಂತರದಲ್ಲಿ ಅಂತ್ಯಗೊಂಡರೆ, ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಭವಿಷ್ಯವನ್ನು ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಿರ್ಧರಿಸಲಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಒಂದು ಟೆಸ್ಟ್ ಗೆಲ್ಲಬೇಕು. ಹಾಗೆಯೇ ಆಸ್ಟ್ರೇಲಿಯಾ ತಂಡವನ್ನು ಶ್ರೀಲಂಕಾ ಒಂದು ಟೆಸ್ಟ್ನಲ್ಲಿ ಸೋಲಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ.

2-3: ಭಾರತದ ವಿರುದ್ಧ ಆಸ್ಟ್ರೇಲಿಯಾ 2-3 ಅಂತರದಿಂದ ಸರಣಿ ಗೆದ್ದರೆ, ಮೂರು ಸರಣಿಗಳ ಫಲಿತಾಂಶದ ಬಳಿಕ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭವಿಷ್ಯ ನಿರ್ಧಾರವಾಗಲಿದೆ. ಅಂದರೆ ಇಲ್ಲಿ ನ್ಯೂಝಿಲೆಂಡ್ ಇಂಗ್ಲೆಂಡ್ ವಿರುದ್ಧ ಒಂದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯದಲ್ಲಿ ಗೆಲ್ಲಬಾರದು, ಸೌತ್ ಆಫ್ರಿಕಾ ಮುಂದಿನ 4 ಟೆಸ್ಟ್ ಪಂದ್ಯಗಳಲ್ಲಿ 2 ರಲ್ಲಿ ಸೋಲಬೇಕು. ಹಾಗೆಯೇ ಶ್ರೀಲಂಕಾ ಮುಂದಿನ 4 ಪಂದ್ಯಗಳಲ್ಲಿ ಎರಡಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಗೆಲ್ಲಬಾರದು. ಹೀಗಾದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.
Published On - 10:54 am, Sun, 10 November 24
