Updated on: Nov 10, 2024 | 8:03 AM
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಕೇವಲ 13 ವಿಕೆಟ್ ಕೀಪರ್ಗಳು ಬ್ಯಾಟರ್ಗಳು ಮಾತ್ರ ಶತಕ ಸಿಡಿಸಿದ್ದಾರೆ. ಈ ಹದಿಮೂರು ವಿಕೆಟ್ ಕೀಪರ್ಗಳಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ್ದು ಇಂಗ್ಲೆಂಡ್ನ ಫಿಲ್ ಸಾಲ್ಟ್. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸುವುದರೊಂದಿಗೆ ಸಾಲ್ಟ್ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಾರ್ಬಡೋಸ್ನ ಕಿಂಗ್ಸ್ಸ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿಂಡೀಸ್ ನೀಡಿದ 183 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಫಿಲ್ ಸಾಲ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಾಲ್ಟ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಈ ಸಿಕ್ಸ್-ಫೋರ್ಗಳೊಂದಿಗೆ ಫಿಲ್ ಸಾಲ್ಟ್ ಕೇವಲ 53 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಶತಕದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆಯನ್ನು ಸಾಲ್ಟ್ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (ಭಾರತ), ಲೆಸ್ಲಿ ಡನ್ಬಾರ್ (ಸರ್ಬಿಯಾ) 2 ಶತಕಗಳೊಂದಿಗೆ ಸಾಲ್ಟ್ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಇದೀಗ ಮೂರನೇ ಸೆಂಚುರಿ ಸಿಡಿಸುವ ಮೂಲಕ ಫಿಲ್ ಸಾಲ್ಟ್ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಮೂರು ಸೆಂಚುರಿ ಸಿಡಿಸಿದ ವಿಶೇಷ ವಿಶ್ವ ದಾಖಲೆ ಕೂಡ ಫಿಲ್ ಸಾಲ್ಟ್ ಪಾಲಾಗಿದೆ. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸುವ ಮೂಲಕ ಸಾಲ್ಟ್ ಸೆಂಚುರಿ ಖಾತೆ ತೆರೆದಿದ್ದರು. ಇದಾದ ಬಳಿಕ 2023 ರಲ್ಲೇ ವಿಂಡೀಸ್ ವಿರುದ್ಧದ 2ನೇ ಟಿ20 ಶತಕ ಸಿಡಿಸಿದ್ದರು. ಇದೀಗ ಮೂರನೇ ಸೆಂಚುರಿ ಚಚ್ಚುವ ಮೂಲಕ ಒಂದೇ ತಂಡದ ವಿರುದ್ಧ ಮೂರು ಟಿ20 ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ 6 ಭರ್ಜರಿ ಸಿಕ್ಸ್, 9 ಫೋರ್ಗಳೊಂದಿಗೆ ಅಜೇಯ 103 ರನ್ ಚಚ್ಚಿದರು. ಈ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 16.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 183 ರನ್ಗಳಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.