ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿವೆ. ಈ ಎಂಟು ತಂಡಗಳಲ್ಲಿ 7 ಟೀಮ್ಗಳ ಬ್ಯಾಟರ್ಗಳಿಂದ ಶತಕ ಮೂಡಿಬಂದಿವೆ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸಿರುವ ಪಾಕಿಸ್ತಾನ್ ಬ್ಯಾಟರ್ಗಳ ಕಡೆಯಿಂದ ಒಂದೇ ಒಂದು ಸೆಂಚುರಿ ಮೂಡಿಬಂದಿಲ್ಲ ಎಂಬುದೇ ವಿಪರ್ಯಾಸ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ನ್ಯೂಝಿಲೆಂಡ್ನ ವಿಲ್ ಯಂಗ್ (107) ಹಾಗೂ ಟಾಮ್ ಲ್ಯಾಥಮ್ (117) ಶತಕ ಸಿಡಿಸಿದ್ದರು. ಇದಾದ ಬಳಿಕ ಬಾಂಗ್ಲಾದೇಶ್ ವಿರುದ್ಧ ರಚಿನ್ ರವೀಂದ್ರ (112) ಶತಕ ಬಾರಿಸಿ ಮಿಂಚಿದ್ದಾರೆ.
ಇನ್ನು ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ದುಬೈನಲ್ಲಿ ನಡೆದ ಭಾರತದ ವಿರುದ್ಧದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತೌಹಿದ್ 118 ಎಸೆತಗಳಲ್ಲಿ 100 ರನ್ ಬಾರಿಸಿದ್ದಾರೆ.
ಹಾಗೆಯೇ ಸೌತ್ ಆಫ್ರಿಕಾ ಪರ ರಯಾನ್ ರಿಕೆಲ್ಟನ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂದಿದೆ. ಕರಾಚಿಯಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ 106 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ.
ಇನ್ನು ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ 143 ಎಸೆತಗಳಲ್ಲಿ 165 ರನ್ ಬಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಬೆನ್ ಡಕೆಟ್ ಸೆಂಚುರಿ ಬಾರಿಸಿದ ಪಂದ್ಯದಲ್ಲೇ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಶತಕ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 86 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿ ಇಂಗ್ಲಿಸ್ ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬ್ಯಾಟರ್ ಇಬ್ರಾಹಿಂ ಝದ್ರಾನ್ ದಾಖಲೆಯ ಶತಕ ಸಿಡಿಸಿದ್ದಾರೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ 146 ಎಸೆತಗಳನ್ನು ಎದುರಿಸಿದ ಝದ್ರಾನ್ 177 ರನ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಹಾಗೆಯೇ ಅಫ್ಘಾನಿಸ್ತಾನ್ ವಿರುದ್ಧ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಸಹ ಶತಕ ಬಾರಿಸಿದ್ದಾರೆ. ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 120 ರನ್ ಬಾರಿಸಿ ಮಿಂಚಿದ್ದಾರೆ.
ಇನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಜೇಯ 101 ರನ್ ಬಾರಿಸಿದರೆ, ಪಾಕಿಸ್ತಾನ್ ವಿರುದ್ಧದ ಮಹತ್ವದ ಮ್ಯಾಚ್ನಲ್ಲಿ ವಿರಾಟ್ ಕೊಹ್ಲಿ ಅಜೇಯ ಸೆಂಚುರಿ ಸಿಡಿಸಿದ್ದಾರೆ.
ಅಂದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ 7 ತಂಡಗಳ ಆಟಗಾರರು ಒಟ್ಟು 11 ಶತಕಗಳನ್ನು ಬಾರಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಆತಿಥೇಯ ಪಾಕಿಸ್ತಾನದ ಒಬ್ಬನೇ ಒಬ್ಬ ಬ್ಯಾಟರ್ ಇಲ್ಲ ಎಂಬುದು ವಿಶೇಷ.
Published On - 10:19 am, Thu, 27 February 25