IPL 2022ನ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಸೋತಿದೆ. ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು 5 ವಿಕೆಟ್ಗಳಿಂದ ಜಯ ಸಾಧಿಸಿ ಗೆಲುವಿನ ನಗೆ ಬೀರಿತು. ವಿಶೇಷ ಎಂದರೆ ಈ ಸೋಲಿನ ಹೊರತಾಗಿಯೂ ಆರ್‌ಸಿಬಿ-ಪಂಜಾಬ್ ಕಿಂಗ್ಸ್ ಆಟಗಾರರು ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಹಾಗಿದ್ರೆ ಈ ಪಂದ್ಯದಲ್ಲಿ ಮೂಡಿಬಂದ ದಾಖಲೆಗಳಾವುವು ನೋಡೋಣ...
ಡುಪ್ಲೆಸಿಸ್ ದಾಖಲೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ (88) ಐಪಿಎಲ್‌ನಲ್ಲಿ ನಾಯಕತ್ವದ ಪದಾರ್ಪಣಾ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಅತ್ಯಧಿಕ ಸ್ಕೋರ್ (88) ದಾಖಲಿಸಿದರು. ಅಲ್ಲದೆ ಐಪಿಎಲ್‌ನಲ್ಲಿ 3000 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
150 ವಿಕೆಟ್: ಈ ಪಂದ್ಯದಲ್ಲಿ RCB ವೇಗಿ ಹರ್ಷಲ್ ಪಟೇಲ್ T20 ಪಂದ್ಯಗಳಲ್ಲಿ 150 ವಿಕೆಟ್‌ಗಳನ್ನು ಪೂರೈಸಿದರು. ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಕೇವಲ 1 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು.
ಅತ್ಯಧಿಕ ಜೊತೆಯಾಟ: ಆರ್‌ಸಿಬಿ ಫಾಫ್ ಡು ಪ್ಲೆಸಿಸ್ ಮತ್ತು ಕೊಹ್ಲಿ 118 ರನ್ಗಳ ಜೊತೆಯಾಟವಾಡುವ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ದ ಅತ್ಯುತ್ತಮ ಜೊತೆಯಾಟವಾಡಿದ ಮೂರನೇ ಜೋಡಿ ಎನಿಸಿಕೊಂಡರು. ಇದಕ್ಕೂ ಮುನ್ನ ಕ್ರಿಸ್ ಗೇಲ್ ಮತ್ತು ಕೊಹ್ಲಿ ಪಂಜಾಬ್ ವಿರುದ್ದ 2013 ರಲ್ಲಿ 136 ರನ್ ಮತ್ತು 2012 ರಲ್ಲಿ 119 ರನ್ಗಳ ಜೊತೆಯಾಟವಾಡಿದ್ದರು.
ಹೆಚ್ಚುವರಿ ರನ್: PBKS vs RCB ಪಂದ್ಯದಲ್ಲಿ ಒಟ್ಟು 45 ಎಕ್ಸ್‌ಟ್ರಾ ರನ್ಗಳು ಮೂಡಿಬಂದಿವೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಹೆಚ್ಚುವರಿ ರನ್ ಆಗಿದೆ. ಇದಕ್ಕೂ ಮುನ್ನ ಈ ಕಳಪೆ ದಾಖಲೆ ಡೆಕ್ಕನ್ ಚಾರ್ಜರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರಿನಲ್ಲಿತ್ತು. 2008 ರಲ್ಲಿ ಡೆಕ್ಕನ್ ಚಾರ್ಜರ್ಸ್-ಕೆಕೆಆರ್ ತಂಡಗಳ ಬೌಲರುಗಳು ಒಟ್ಟು 38 ಎಕ್ಸ್‌ಟ್ರಾ ರನ್ ನೀಡಿದ್ದರು. ಇದೀಗ 45 ರನ್ಗಳ ಎಕ್ಸ್‌ಟ್ರಾ ರನ್ಗಳನ್ನು ನೀಡುವ ಮೂಲಕ ಕಳಪೆ ದಾಖಲೆ ಬರೆದಿದೆ.
ಅತ್ಯಧಿಕ ರನ್ ಚೇಸ್: ಪಂಜಾಬ್ ಕಿಂಗ್ಸ್ ತಂಡವು ಮೂರನೇ ಬಾರಿ 200ಕ್ಕೂ ಅಧಿಕ ರನ್ ಚೇಸ್ ಮಾಡಿದ್ದಾರೆ. ಮೂರು ಬಾರಿ ಕೂಡ 206 ರನ್ಗಳನ್ನು ಚೇಸ್ ಮಾಡಿರುವುದು ವಿಶೇಷ. ಈ ಹಿಂದೆ SRH ಮತ್ತು CSK ವಿರುದ್ಧ 206 ರ ಅದೇ ಗುರಿಯನ್ನು ಸಾಧಿಸಿದ್ದರು. ಇದೀಗ ಆರ್‌ಸಿಬಿ ವಿರುದ್ದ ಕೂಡ 206 ರನ್ಗಳ ಟಾರ್ಗೆಟ್ ಅನ್ನು ಚೇಸ್ ಮಾಡಿದೆ.