
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಗಿದಿದೆ. ಇದೀಗ ಉಭಯ ತಂಡಗಳು ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಅಕ್ಟೋಬರ್ 29 ರಿಂದ ಶುರುವಾಗಲಿರುವ ಈ ಸರಣಿಯಿಂದ ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ. ಅವರೆಂದರೆ...

ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿರುವ ಕಮಿನ್ಸ್ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದ ಕಮಿನ್ಸ್ ಮುಂಬರುವ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕ್ಯಾಮರೋನ್ ಗ್ರೀನ್: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬೆನ್ನು ನೋವಿನ ಸಮಸ್ಯೆಗೀಡಾಗಿದ್ದಾರೆ. ಹೀಗಾಗಿ ಭಾರತದ ವಿರುದ್ಧದ ಏಕದಿನ ಸರಣಿಯಿಂದ ಕ್ಯಾಮರೋನ್ ಗ್ರೀನ್ ಹೊರಗುಳಿದಿದ್ದರು. ಇದೀಗ ಇದೇ ಕಾರಣದಿಂದಾಗಿ ಟಿ20 ಸರಣಿಯಿಂದಲೂ ಹಿಂದೆ ಸರಿದಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್: ಭಾರತದ ವಿರುದ್ಧದ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯರಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಅವರು ಮೂರನೇ ಪಂದ್ಯದ ವೇಳೆಗೆ ಆಸ್ಟ್ರೇಲಿಯಾ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಹೀಗಾಗಿ ಮೊದಲೆರಡು ಮ್ಯಾಚ್ಗಳಲ್ಲಿ ಮ್ಯಾಕ್ಸ್‌ವೆಲ್ ಕಾಣಿಸಿಕೊಳ್ಳುವುದಿಲ್ಲ.

ಜೋಶ್ ಹೇಝಲ್ವುಡ್: ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹೇಝಲ್ವುಡ್ ವಿಶ್ರಾಂತಿಯ ಕಾರಣ ಮೂರು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಅಂದರೆ ಮೊದಲೆರಡು ಮ್ಯಾಚ್ಗಳಲ್ಲಿ ಕಾಣಿಸಿಕೊಳ್ಳಲಿರುವ ಹೇಝಲ್ವುಡ್ ಕೊನೆಯ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಶಾನ್ ಅಬಾಟ್ (ಮೊದಲ ಮೂರು ಪಂದ್ಯಗಳಿಗೆ ಮಾತ್ರ), ಕ್ಸೇವಿಯರ್ ಬಾರ್ಟ್ಲೆಟ್, ಮಹ್ಲಿ ಬಿಯರ್ಡ್‌ಮನ್ (ಕೊನೆಯ 3 ಪಂದ್ಯಗಳಿಗೆ ಮಾತ್ರ), ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್ (ಕೊನೆಯ ಎರಡು ಪಂದ್ಯಗಳಿಗೆ), ನಾಥನ್ ಎಲ್ಲಿಸ್, ಜೋಶ್ ಹೇಝಲ್ವುಡ್ (ಮೊದಲೆರಡು ಪಂದ್ಯಗಳಿಗೆ ಮಾತ್ರ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್ (ಕೊನೆಯ ಮೂರು ಪಂದ್ಯಗಳಿಗೆ ಮಾತ್ರ), ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.

ರಿಷಭ್ ಪಂತ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಗಾಯಗೊಂಡಿದ್ದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇನ್ನೂ ಕೂಡ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಪಂತ್ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಹಾರ್ದಿಕ್ ಪಾಂಡ್ಯ: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಆಲ್ರೌಂಡರ್ ಪ್ರದರ್ಶನ ನೀಡಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಗಾಯದ ಸಮಸ್ಯೆ. ಏಷ್ಯಾಕಪ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಪಾಂಡ್ಯ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಆಸೀಸ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ.

ರೋಹಿತ್ ಶರ್ಮಾ: 2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು ರೋಹಿತ್ ಶರ್ಮಾ. ಆದರೆ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ ಹಿಟ್ಮ್ಯಾನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮಾ ಅವರನ್ನು ಪರಿಗಣಿಸಲಾಗಿಲ್ಲ.

ರವೀಂದ್ರ ಜಡೇಜಾ: ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ. ಚುಟುಕು ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಜಡೇಜಾ ಇದೀಗ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನತ್ತ ಫೋಕಸ್ ಮಾಡಿದ್ದಾರೆ. ಹೀಗಾಗಿ ಅವರನ್ನೂ ಸಹ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ವಿರಾಟ್ ಕೊಹ್ಲಿ: ಟಿ20 ವಿಶ್ವಕಪ್ 2024 ರಲ್ಲಿ ಫೈನಲ್ ಪಂದ್ಯದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಿಂಗ್ ಕೊಹ್ಲಿ ಕೂಡ ಕಾಣಿಸಿಕೊಳ್ಳುವುದಿಲ್ಲ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ.