
ಇಂಗ್ಲೆಂಡ್ ಪ್ರವಾಸದಲ್ಲಿ ತನ್ನ ಮಾರಕ ದಾಳಿಯ ಮೂಲಕವೇ ಸಂಚಲನ ಮೂಡಿಸಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ಗೆ ಇದೀಗ ಐಸಿಸಿ ಕೂಡ ಟೆಸ್ಟ್ ಬೌಲರ್ಗಳ ಶ್ರೇಯಾಂಕದಲ್ಲಿ ಭರ್ಜರಿ ಮುಂಬಡ್ತಿ ನೀಡಿದೆ. 23 ವಿಕೆಟ್‌ಗಳೊಂದಿಗೆ ಆಂಗ್ಲ ಪ್ರವಾಸವನ್ನು ಮುಗಿಸಿರುವ ಸಿರಾಜ್ ಇದೀಗ ಐಸಿಸಿ ರ್ಯಾಂಕಿಂಗ್ನಲ್ಲಿ ಬರೋಬ್ಬರಿ 12 ಸ್ಥಾನ ಮೇಲೇರಿದ್ದಾರೆ.

ಲೀಡ್ಸ್ ಟೆಸ್ಟ್ನಿಂದ ಆರಂಭವಾದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ ಓವಲ್ ಟೆಸ್ಟ್ ಪಂದ್ಯದೊಂದಿಗೆ ಮುಕ್ತಾಯವಾಯಿತು. ಈ ಪ್ರವಾಸದಲ್ಲಿ ನಡೆದ ಐದಕ್ಕೆ ಐದು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಆಡಿದ ಏಕೈಕ ವೇಗದ ಬೌಲರ್ ಎಂದರೇ ಅದು ಮೊಹಮ್ಮದ್ ಸಿರಾಜ್. ಅದರಲ್ಲೂ ಬುಮ್ರಾ ಅನುಪಸ್ಥಿತಿಯಲ್ಲಿ ತಂಡದ ವೇಗದ ದಾಳಿಯನ್ನು ಸಿರಾಜ್ ಅಚ್ಚುಕಟ್ಟಾಗಿ ಮುನ್ನಡೆಸಿದರು.

ಸರಣಿಯಲ್ಲಿ 23 ವಿಕೆಟ್ ಉರುಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಸಿರಾಜ್ ಇದೀಗ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿಯೂ ದೊಡ್ಡ ಜಿಗಿತವನ್ನು ಮಾಡಿದ್ದಾರೆ. ಸಿರಾಜ್ ಜೊತೆಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಶ್ರೇಯಾಂಕವೂ ಸಹ ಸುಧಾರಿಸಿದೆ.

ಐದನೇ ಟೆಸ್ಟ್ ಪಂದ್ಯದಲ್ಲಿ ಒಟ್ಟಾರೆ 9 ವಿಕೆಟ್ ಉರುಳಿಸಿದ ಮೊಹಮ್ಮದ್ ಸಿರಾಜ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಈ ಮೂಲಕ ಐಸಿಸಿ ಪುರುಷರ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ 674 ಅಂಕಗಳನ್ನು ಹೊಂದಿರುವ ಸಿರಾಜ್, ಬರೋಬ್ಬರಿ 12 ಸ್ಥಾನಗಳನ್ನು ಮೇಲೇರುವುದರೊಂದಿಗೆ 15 ನೇ ಸ್ಥಾನವನ್ನು ತಲುಪಿದ್ದಾರೆ.

ಸಿರಾಜ್ ಜೊತೆಗೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸುವ ಕೆಲಸ ಮಾಡಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ರ್ಯಾಂಕಿಂಗ್ನಲ್ಲಿ ಸುಧಾರಣೆ ಕಂಡಿದ್ದಾರೆ. ಈ ಹಿಂದೆ 84 ನೇ ಸ್ಥಾನದಲ್ಲಿದ್ದ ಪ್ರಸಿದ್ಧ್ ಕೃಷ್ಣ ಈಗ 59 ನೇ ಸ್ಥಾನವನ್ನು ತಲುಪಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಇಬ್ಬರೂ ಆಟಗಾರರ ಅತ್ಯುತ್ತಮ ಶ್ರೇಯಾಂಕವಾಗಿದೆ.

ಉಳಿದಂತೆ ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಜಸ್ಪ್ರಿತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ. ಇವರ ಜೊತೆಗೆ ಇಂಗ್ಲೆಂಡ್‌ನ ವೇಗಿ ಗಸ್ ಅಟ್ಕಿನ್ಸನ್ ಓವಲ್ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿ ಮೊದಲ ಬಾರಿಗೆ ಟಾಪ್ 10 ರಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಹಾಗೆಯೇ ಜೋಶ್ ಟಂಗ್ ಕೂಡ ಎಂಟು ವಿಕೆಟ್‌ಗಳನ್ನು ಕಬಳಿಸಿ ಈಗ 46 ನೇ ಸ್ಥಾನಕ್ಕೆ ತಲುಪಿದ್ದಾರೆ.