- Kannada News Photo gallery Cricket photos Rashid Khan Achieves 650 T20 Wickets in The Hundred Tournament
The Hundred: ಬರೋಬ್ಬರಿ 650 ವಿಕೆಟ್..! ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್
Rashid Khan's 650 T20 Wickets: ರಶೀದ್ ಖಾನ್ ಅವರು ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ 3 ವಿಕೆಟ್‌ಗಳನ್ನು ಪಡೆದು ಟಿ20 ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ರಶೀದ್ ಪಾಲಾಗಿದೆ.
Updated on: Aug 06, 2025 | 10:53 PM

ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದ ಪರ ಆಡುತ್ತಿದ್ದಾರೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡ, ಲಂಡನ್ ಸ್ಪಿರಿಟ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ 3 ವಿಕೆಟ್ ಉರುಳಿಸಿದ ರಶೀದ್, ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದರು.

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದ ಪರ ಮಾರಕ ಬೌಲಿಂಗ್ ಮಾಡಿದ ರಶೀದ್ ಖಾನ್ 20 ಎಸೆತಗಳನ್ನು ಬೌಲ್ ಮಾಡಿ 11 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ರಶೀದ್ ಉರುಳಿಸಿದ ಈ ಮೂರು ವಿಕೆಟ್ಗಳಲ್ಲಿ ವೇಯ್ನ್ ಮ್ಯಾಡ್ಸನ್, ಲಿಯಾಮ್ ಡಾಸನ್ ಮತ್ತು ರಯಾನ್ ಹಿಗ್ಗಿನ್ಸ್ ಸೇರಿದ್ದರು.

2ನೇ ವಿಕೆಟ್ ರೂಪದಲ್ಲಿ ಲಿಯಾಮ್ ಡಾಸನ್ ವಿಕೆಟ್ ಪಡೆದ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಸಾಧನೆ ಮಾಡಿದರು. ಈ ಮೂಲಕ ರಶೀದ್ ಖಾನ್ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ 478 ಇನ್ನಿಂಗ್ಸ್‌ಗಳನ್ನಾಡಿರುವ ರಶೀದ್ 18.54 ಸರಾಸರಿಯಲ್ಲಿ 651 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ ನಾಲ್ಕು ಬಾರಿ 5 ವಿಕೆಟ್‌ಗಳನ್ನು ಪಡೆದಿದ್ದಾರೆ.

ರಶೀದ್ ಖಾನ್ ಅವರ ಈ ಮಾರಕ ಬೌಲಿಂಗ್‌ನಿಂದಾಗಿ, ಓವಲ್ ಇನ್ವಿನ್ಸಿಬಲ್ಸ್ ತಂಡವು ದಿ ಹಂಡ್ರೆಡ್ 2025 ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ವಿರುದ್ಧ ಆರು ವಿಕೆಟ್‌ಗಳಿಂದ ಜಯಗಳಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ 80 ರನ್‌ಗಳಿಗೆ ಆಲೌಟ್ ಆಯಿತು. ರಶೀದ್ ಖಾನ್ ಹೊರತುಪಡಿಸಿ, ಸ್ಯಾಮ್ ಕರನ್ 19 ಎಸೆತಗಳಲ್ಲಿ 18 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಜೋರ್ಡಾನ್ ಕ್ಲಾರ್ಕ್ ಎರಡು ವಿಕೆಟ್‌ಗಳನ್ನು ಪಡೆದರು.

ಇದಕ್ಕೆ ಉತ್ತರವಾಗಿ, ಟೀಂ ಓವಲ್ ಈ ಪಂದ್ಯವನ್ನು 69 ಎಸೆತಗಳಲ್ಲಿ ಗೆದ್ದುಕೊಂಡಿತು. ತಂಡದ ಪರ ಓಪನರ್ ವಿಲ್ ಜ್ಯಾಕ್ಸ್ 24 ರನ್‌ಗಳನ್ನು ಗಳಿಸಿದರೆ, ಲಂಡನ್ ಸ್ಪಿರಿಟ್ ಪರ ಲಿಯಾಮ್ ಡಾಸನ್ 20 ಎಸೆತಗಳಲ್ಲಿ 9 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದರು.

ಇನ್ನು ರಶೀದ್ ಖಾನ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಅಫ್ಘಾನಿಸ್ತಾನ ಪರ 96 ಟಿ20 ಪಂದ್ಯಗಳನ್ನಾಡಿರುವ ಅವರು 13.80 ಸರಾಸರಿಯಲ್ಲಿ 161 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 114 ಏಕದಿನ ಪಂದ್ಯಗಳಲ್ಲಿ 20.40 ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರು ಟೆಸ್ಟ್ ಪಂದ್ಯಗಳನ್ನಾಡಿರುವ ರಶೀದ್ 20.44 ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ.
