
ಪೃಥ್ವಿ ಶಾ (Prithvi Shaw) ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಈ ಬಾರಿ ಅವರು ಸುದ್ದಿಯಾಗಿರುವುದು ಭರ್ಜರಿ ಬ್ಯಾಟಿಂಗ್ನಿಂದ ಎಂಬುದು ವಿಶೇಷ. ಕಳೆದ ಕೆಲ ವರ್ಷಗಳಿಂದ ಕಳಪೆ ಫಾರ್ಮ್ ಹಾಗೂ ವಿವಾದಗಳಿಂದ ಸುದ್ದಿಯಲ್ಲಿದ್ದ ಪೃಥ್ವಿ ಇದೀಗ ಮತ್ತೆ ತಮ್ಮ ಅಬ್ಬರ ಶುರು ಮಾಡಿದ್ದಾರೆ.

ಈ ಬಾರಿಯ ರಣಜಿ ಟೂರ್ನಿಗಾಗಿ ಮಹಾರಾಷ್ಟ್ರ ತಂಡವನ್ನು ಸೇರಿಕೊಂಡಿರುವ ಪೃಥ್ವಿ ಶಾ ಇದೀಗ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಅದು ಕೂಡ ತಮ್ಮ ಮಾಜಿ ತಂಡ ಮುಂಬೈ ವಿರುದ್ಧ ಎಂಬುದು ವಿಶೇಷ. ಅಂದರೆ ಕಳೆದ ವರ್ಷದವರೆಗೆ ಪೃಥ್ವಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸಿದ್ದರು.

ಇದೀಗ ಮಹಾರಾಷ್ಟ್ರ ರಣಜಿ ತಂಡದ ಭಾಗವಾಗಿರುವ ಪೃಥ್ವಿ ಶಾ ಮುಂಬೈ ವಿರುದ್ದದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆರಂಭದಿಂದಲೇ ಉತ್ತಮ ಹೊಡೆತಗಳೊಂದಿಗೆ ಗಮನ ಸೆಳೆದ ಪೃಥ್ವಿ 220 ಎಸೆತಗಳಲ್ಲಿ 22 ಫೋರ್ ಹಾಗೂ 3 ಸಿಕ್ಸರ್ಗಳೊಂದಿಗೆ 181 ರನ್ ಬಾರಿಸಿ ಮಿಂಚಿದ್ದಾರೆ.

ಈ ಭರ್ಜರಿ ಶತಕದೊಂದಿಗೆ ಪೃಥ್ವಿ ಶಾ ಈ ಬಾರಿಯ ರಣಜಿ ಟೂರ್ನಿಯ ಮೂಲಕ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಇದಕ್ಕೂ ಮುನ್ನ ಪೃಥ್ವಿ ಮುಂಬೈ ರಣಜಿ ತಂಡದ ಪರ 58 ಪಂದ್ಯಗಳನ್ನಾಡಿದ್ದರು. ಈ ವೇಳೆ 4556 ರನ್ ಕಲೆಹಾಕಿದ್ದಾರೆ. ಇದೀಗ ಮಹಾರಾಷ್ಟ್ರ ತಂಡದ ಪರ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಅಂದಹಾಗೆ ಪೃಥ್ವಿ ಶಾ ಈ ಹಿಂದೆ ಟೀಮ್ ಇಂಡಿಯಾ ಪರ 12 ಪಂದ್ಯಗಳನ್ನಾಡಿದ್ದರು. ಅದರಲ್ಲೂ ಭಾರತದ ಪರ 5 ಟೆಸ್ಟ್ ಪಂದ್ಯಗಳಲ್ಲಿ 9 ಇನಿಂಗ್ಸ್ ಆಡಿರುವ ಅವರು 1 ಶತಕ ಹಾಗೂ 2 ಅರ್ಧಶತಕಗಳೊಂದಿಗೆ 339 ರನ್ ಕಲೆಹಾಕಿದ್ದರು. ಇನ್ನು 6 ಏಕದಿನ ಪಂದ್ಯಗಳಿಂದ 189 ರನ್ ಗಳಿಸಿದ್ದರು. ಹಾಗೆಯೇ ಟೀಮ್ ಇಂಡಿಯಾ ಪರ 1 ಟಿ20 ಪಂದ್ಯದಲ್ಲಿ ಬ್ಯಾಟ್ ಬೀಸಿದ್ದ ಪೃಥ್ವಿ ಶೂನ್ಯಕ್ಕೆ ಔಟಾಗಿದ್ದರು.

2021 ರಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದ ಪೃಥ್ವಿ ಶಾ ಬಳಿಕ ದೇಶೀಯ ಅಂಗಳದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದೇ ಕಾರಣದಿಂದ ಮುಂಬೈ ರಣಜಿ ತಂಡದಿಂದಲೂ ಗೇಟ್ ಪಾಸ್ ಸಿಕ್ಕಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಪೃಥ್ವಿ ಇದೀಗ ರಣಜಿ ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.