ಆಸ್ಟ್ರೇಲಿಯಾ ತಂಡಕ್ಕೆ ಆಘಾತದ ಮೇಲೆ ಆಘಾತ..!
Australia vs England: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಯು ನವೆಂಬರ್ 21 ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಮೊದಲ ಪಂದ್ಯಕ್ಕೆ ನಾಯಕ ಪ್ಯಾಟ್ ಕಮಿನ್ಸ್ ಅಲಭ್ಯರಾಗಲಿದ್ದಾರೆ.
Updated on:Oct 08, 2025 | 9:55 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯಿಂದ ಹೊರಗುಳಿದಿದ್ದ ಆಸೀಸ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇದೀಗ ಆ್ಯಶಸ್ ಸರಣಿಯ ಮೊದಲ ಪಂದ್ಯಕ್ಕೂ ಅಲಭ್ಯರಾಗುವುದು ಖಚಿತವಾಗಿದೆ. ಇಂಗ್ಲೆಂಡ್ ವಿರುದ್ಧದ ಈ ಪ್ರತಿಷ್ಠಿತ ಸರಣಿಯ ಮೊದಲ ಪಂದ್ಯಕ್ಕೆ ಕಮಿನ್ಸ್ ಲಭ್ಯರಿರುವುದಿಲ್ಲ ಎಂದು ವರದಿಯಾಗಿದೆ.

ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ ಅವರಿಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಇದೇ ಕಾರಣದಿಂದ ಟೀಮ್ ಇಂಡಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ನೋವಿನ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ನವೆಂಬರ್ 21 ರಂದು ಶುರುವಾಗಲಿರುವ ಆ್ಯಶಸ್ ಸರಣಿಯ ಮೊದಲ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್ ಅಲಭ್ಯರಾಗಲಿದ್ದಾರೆ. ಇದಾಗ್ಯೂ ಅವರು ಉಳಿದ ಮ್ಯಾಚ್ಗಳಿಗೆ ಲಭ್ಯರಿರಲಿದ್ದಾರಾ ಎಂಬುದರ ಬಗ್ಗೆ ಕೂಡ ಖಚಿತತೆ ಇಲ್ಲ. ಅಂದರೆ ನವೆಂಬರ್ ತಿಂಗಳಾಂತ್ಯದ ಒಳಗೆ ಸಂಪೂರ್ಣ ಗುಣಮುಖರಾದರೆ ಮಾತ್ರ ಅವರು ಆ್ಯಶಸ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿಯು ನವೆಂಬರ್ 21 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯು ಇಂಗ್ಲೆಂಡ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.

ಏಕೆಂದರೆ ಕಳೆದ ಬಾರಿ ಇಂಗ್ಲೆಂಡ್ನಲ್ಲಿ ನಡೆದ ಆ್ಯಶಸ್ ಸರಣಿಯನ್ನು 2-2 ಅಂತರದಿಂದ ಡ್ರಾಗೊಳಿಸುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿತ್ತು. ಇದೀಗ ತವರಿನಲ್ಲಿ ನಡೆಯಲಿರುವ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದು ಆ್ಯಶಸ್ ಟ್ರೋಫಿ ಮರಳಿ ಪಡೆಯುವ ಇರಾದೆಯಲ್ಲಿದೆ ಇಂಗ್ಲೆಂಡ್ ಪಡೆ.

ಇತ್ತ ಸೊಂಟದ ಮೂಳೆಯ ನೋವಿನಿಂದ ಬಳಲುತ್ತಿರುವುದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಈ ಸರಣಿಯಿಂದ ಹೊರಗುಳಿದರೆ, ಆಸೀಸ್ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ. ಒಂದು ವೇಳೆ ಕಮಿನ್ಸ್ ಆ್ಯಶಸ್ ಸರಣಿಗೆ ಅಲಭ್ಯರಾದರೆ, ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
Published On - 9:54 am, Wed, 8 October 25
