- Kannada News Photo gallery Cricket photos PSL 2023 Eight CCTV Cameras Fibre Cable Generator Battery Stolen From Gaddafi Stadium in Lahore
PSL: ಪಾಕಿಸ್ತಾನದ ಗಡಾಫಿ ಸ್ಟೇಡಿಯಂನಲ್ಲಿ ಕಳ್ಳತನ; 8 ಸಿಸಿಟಿವಿ ಕ್ಯಾಮೆರಾ, ಫೈಬರ್ ಕೇಬಲ್, ಜನರೇಟರ್ ಬ್ಯಾಟರಿ ಕದ್ದ ಕಳ್ಳರು
PSL 2023: ಪಂದ್ಯಾವಳಿ ಮೇಲೆ ನಿಗಾ ಇಡಲು ಗಡಾಫಿ ಕ್ರೀಡಾಂಗಣದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡಲಾಗಿತ್ತು. ಆದರೆ ಭದ್ರತೆಗಾಗಿ ಕ್ರೀಡಾಂಗಣದ ಒಳಗಡೆ ಅಳವಡಿಸಲಾಗಿದ್ದ 8 ಭದ್ರತಾ ಕ್ಯಾಮೆರಾಗಳನ್ನೇ ಕಳವು ಮಾಡಲಾಗಿದೆ.
Updated on:Feb 26, 2023 | 3:50 PM

ಪ್ರಸ್ತುತ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿ ನಡೆಯುತ್ತಿದೆ. ಒಂದೆಡೆ ರಾಜಕೀಯ ಅರಾಜಕತೆಯಿಂದ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಪಾಕ್ ನಿವಾಸಿಗಳಿಗೆ ಈ ಲೀಗ್ನಿಂದ ಕೊಂಚ ಮನರಂಜನೆ ಸಿಗುತ್ತಿದೆ. ಆದರೆ ಈ ನಡುವೆ ಪಂದ್ಯಾವಳಿಗಾಗಿ ಕ್ರೀಡಾಂಗಣದಲ್ಲಿ ಅಳವಡಿಸಿಲಾಗಿದ್ದ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳನ್ನು ಕಳ್ಳರು ದೋಚಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿ ಮೇಲೆ ನಿಗಾ ಇಡಲು ಗಡಾಫಿ ಕ್ರೀಡಾಂಗಣದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡಲಾಗಿತ್ತು. ಆದರೆ ಭದ್ರತೆಗಾಗಿ ಕ್ರೀಡಾಂಗಣದ ಒಳಗಡೆ ಅಳವಡಿಸಲಾಗಿದ್ದ 8 ಭದ್ರತಾ ಕ್ಯಾಮೆರಾಗಳನ್ನೇ ಕಳವು ಮಾಡಲಾಗಿದೆ.

ಕ್ರೀಡಾಂಗಣದ ಒಳಗಿನಿಂದ ಭದ್ರತಾ ಕ್ಯಾಮೆರಾಗಳು ಮಾತ್ರವಲ್ಲದೆ ಕೆಲವು ಜನರೇಟರ್ ಬ್ಯಾಟರಿಗಳು ಮತ್ತು ಫೈಬರ್ ಕೇಬಲ್‌ಗಳು, ಸಿಸಿಟಿವಿ ದೃಶ್ಯಗಳು ಮತ್ತು ಪಿಎಸ್‌ಎಲ್ ಪಂದ್ಯಗಳ ಮೇಲ್ವಿಚಾರಣೆಗೆ ಬೇಕಾದ ವಸ್ತುಗಳನ್ನು ಸಹ ಕಳವು ಮಾಡಲಾಗಿದೆ.

ಸ್ಟೇಡಿಯಂ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ದಾಖಲಾಗಿದ್ದು, ಕಳ್ಳರು ಕದ್ದ ಮಾಲುಗಳೊಂದಿಗೆ ಓಡಿ ಹೋಗುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.

ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ. ಆದರೆ ಈ ಕಳ್ಳತನ ಪ್ರಕರಣದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.
Published On - 3:24 pm, Sun, 26 February 23




