- Kannada News Photo gallery Cricket photos Ranji Trophy: Mohammed Shami picks 7 Wickets in Bengal's thrilling win
7 ವಿಕೆಟ್ ಕಬಳಿಸಿ ರೋಚಕ ಜಯ ತಂದುಕೊಟ್ಟ ಮೊಹಮ್ಮದ್ ಶಮಿ
Mohammed Shami: ಮೊಹಮ್ಮದ್ ಶಮಿ ಗಾಯದ ಕಾರಣ ಕಳೆದ ಒಂದು ವರ್ಷದಿಂದ ಮೈದಾನದಿಂದ ದೂರವೇ ಉಳಿದಿದ್ದರು. ಇದೀಗ ಕಂಬ್ಯಾಕ್ ಮಾಡಿರುವ ಶಮಿ, ಮೊದಲ ಪಂದ್ಯದಲ್ಲೇ 7 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿರುವ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ.
Updated on: Nov 17, 2024 | 10:23 AM

ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿಯ ಪಂದ್ಯದಲ್ಲಿ ಮಧ್ಯಪ್ರದೇಶ್ ವಿರುದ್ಧ ಬಂಗಾಳ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದ ಗೆಲುವಿನ ರೂವಾರಿ ಮೊಹಮ್ಮದ್ ಶಮಿ. ಬಂಗಾಳ ಪರ ಕಣಕ್ಕಿಳಿದಿರುವ ಶಮಿ ಒಟ್ಟು 7 ವಿಕೆಟ್ಗಳನ್ನು ಉರುಳಿಸಿ ಮಿಂಚಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಂಗಾಳ ತಂಡವು 228 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಮಧ್ಯಪ್ರದೇಶ್ ತಂಡಕ್ಕೆ ಮೊಹಮ್ಮದ್ ಶಮಿ ಮಾರಕವಾಗಿ ಪರಿಣಮಿಸಿದರು. ಪರಿಣಾಮ ಮಧ್ಯಪ್ರದೇಶ್ ತಂಡವು ಕೇವಲ 167 ರನ್ಗಳಿಗೆ ಆಲೌಟ್ ಆಯಿತು. ಬಂಗಾಳ ಪರ ಶಮಿ 4 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಬಂಗಾಳ ತಂಡವು 276 ರನ್ ಕಲೆಹಾಕುವ ಮೂಲಕ ಮಧ್ಯಪ್ರದೇಶ್ ತಂಡಕ್ಕೆ 338 ರನ್ಗಳ ಗುರಿ ನೀಡಿದರು. ಈ ಗುರಿಯನ್ನು ಬೆನ್ನತ್ತಿದ ಮಧ್ಯಪ್ರದೇಶ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ತಮ್ಮ ಅನುಭವವನ್ನು ಧಾರೆಯೆರೆದ ಶಮಿ ಹಾಗೂ ಶಹಬಾಝ್ ಅಹ್ಮದ್ ಅಂತಿಮ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದರು.

ಅದರಲ್ಲೂ ಮಧ್ಯಪ್ರದೇಶ್ ತಂಡದ ಗೆಲುವಿಗೆ ಕೇವಲ 11 ರನ್ಗಳ ಅವಶ್ಯಕತೆಯಿದ್ದಾಗ ಮೊಹಮ್ಮದ್ ಶಮಿ, ಕುಮಾರ್ ಕಾರ್ತಿಕೇಯ ವಿಕೆಟ್ ಕಬಳಿಸಿದರು. ಈ ಮೂಲಕ ಮಧ್ಯಪ್ರದೇಶ್ ತಂಡವನ್ನು 326 ರನ್ಗಳಿಗೆ ಆಲೌಟ್ ಮಾಡಿ ರೋಚಕ ಜಯ ತಂದುಕೊಟ್ಟರು.

ಇನ್ನು ಈ ಪಂದ್ಯದಲ್ಲಿ ಒಟ್ಟು 44 ಓವರ್ಗಳನ್ನು ಎಸೆದ ಮೊಹಮ್ಮದ್ ಶಮಿ 156 ರನ್ ನೀಡುವ ಮೂಲಕ 7 ವಿಕೆಟ್ ಕಬಳಿಸಿ ಮಿಂಚಿದರು. ಅಲ್ಲದೆ ಬ್ಯಾಟಿಂಗ್ನಲ್ಲೂ 37 ರನ್ಗಳ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
