
ಐಪಿಎಲ್ 2026 ರ ಮಿನಿ ಹರಾಜು ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮುನ್ನ ಟ್ರೇಡಿಂಗ್ ವಿಂಡೋದಲ್ಲಿ ಕೆಲವು ಫ್ರಾಂಚೈಸಿಗಳು, ಕೆಲವು ಆಟಗಾರರನ್ನು ಇತರ ಫ್ರಾಂಚೈಸಿಗಳಿಂದ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿವೆ. ಅದರಲ್ಲಿ ಪ್ರಮುಖ ಹೆಸರು, ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ. ಲೀಗ್‌ನ ಮಿನಿ ಹರಾಜಿಗೆ ಮುಂಚಿತವಾಗಿ, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಇಬ್ಬರು ಸೂಪರ್‌ಸ್ಟಾರ್ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ ವ್ಯಾಪಾರ ಒಪ್ಪಂದವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲವಾದರೂ, ಈ ಬಗ್ಗೆ ಒಂದೊಂದು ವಿಚಾರಗಳು ನಿಧಾನವಾಗಿ ಹೊರಹೊಮ್ಮುತ್ತಿವೆ. ಅದರಂತೆ ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಂಜು ಸ್ಯಾಮ್ಸನ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಳ್ಳುತ್ತಿರುವ ರವೀಂದ್ರ ಜಡೇಜಾ, ಈ ಒಪ್ಪಂದವನ್ನು ಒಪ್ಪಿಕೊಳ್ಳುವ ಮೊದಲು ತಂಡದ ನಾಯಕತ್ವ ನನಗೆ ನೀಡಬೇಕೆಂಬ ಷರತ್ತು ಹಾಕಿದ್ದಾರೆ ಎನ್ನಲಾಗುತ್ತಿದೆ.

ಹಾಗೆಯೇ ರವೀಂದ್ರ ಜಡೇಜಾ ಅವರ ಈ ಷರತ್ತನ್ನು ರಾಜಸ್ಥಾನ್ ಫ್ರಾಂಚೈಸಿ ಕೂಡ ಒಪ್ಪಿದೆ ಎಂದು ವರದಿಯಾಗಿದೆ. ನ್ಯೂಸ್ 18 ವರದಿಯ ಪ್ರಕಾರ, ರಾಜಸ್ಥಾನ ರಾಯಲ್ಸ್ ತಂಡವು ಜಡೇಜಾ ಅವರಂತಹ ಅನುಭವಿ ಆಟಗಾರ ಮತ್ತು ಹೊಸ ಮುಖಗಳ ನಡುವಿನ ನಾಯಕತ್ವ ಬದಲಾವಣೆಗೆ ಸಿದ್ಧವಾಗಿದೆ. ಜಡೇಜಾ ತಮ್ಮ ಐಪಿಎಲ್ ವೃತ್ತಿಜೀವನವನ್ನು ಈ ಫ್ರಾಂಚೈಸಿಯೊಂದಿಗೆ ಪ್ರಾರಂಭಿಸಿದ್ದರಿಂದ ಅವರಿಗೆ ನಾಯಕತ್ವ ನೀಡಲು ಫ್ರಾಂಚೈಸಿ ಯಾವುದೇ ಮೀನಾಮೇಷ ಎಣಿಸಿಲ್ಲ ಎನ್ನಲಾಗುತ್ತಿದೆ.

ವಾಸ್ತವವಾಗಿ, ಸಂಜು ಸ್ಯಾಮ್ಸನ್ ರಾಜಸ್ಥಾನ ತಂಡದಿಂದ ಹೊರಬೀಳುತ್ತಿರುವ ಕಾರಣ, ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಬೇಕಾಗಿದೆ. ಸ್ಯಾಮ್ಸನ್ ಕಳೆದ ನಾಲ್ಕು ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದಾಗ್ಯೂ, ಕಳೆದ ಆವೃತ್ತಿಯಲ್ಲಿ ಅವರು ಗಾಯದಿಂದಾಗಿ ಅಥವಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಿದ್ದಾಗ, ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಿದ್ದರು.

ಆದರೆ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿರುವ ರಾಯಲ್ಸ್ ಫ್ರಾಂಚೈಸಿ, ತಮ್ಮ ಹೊಸ ನಾಯಕನಾಗಿ ಯುವ ಮುಖಕ್ಕಿಂತ ಅನುಭವಕ್ಕೆ ಆದ್ಯತೆ ನೀಡಲು ನಿರ್ಧರಿಸಿದೆ. ಇದು ಸಂಭವಿಸಿದಲ್ಲಿ, ಜಡೇಜಾ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಜಡೇಜಾ ಸಿಎಸ್ಕೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಹೀಗಾಗಿ ಕೇವಲ ಎಂಟು ಪಂದ್ಯಗಳ ನಂತರ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಯಿತು.

ಈಗ, ಜಡೇಜಾ ಅವರನ್ನು ನಾಯಕನನ್ನಾಗಿ ನೇಮಿಸಿದರೆ, ತಂಡದ ಯುವ ಆಟಗಾರರು ಮತ್ತು ನಾಯಕತ್ವದ ಸಂಭಾವ್ಯ ಸ್ಪರ್ಧಿಗಳಾದ ರಿಯಾನ್ ಪರಾಗ್ ಮತ್ತು ಯಶಸ್ವಿ ಜೈಸ್ವಾಲ್ ಅವರಿಗೆ ಕೊಂಚ ಹಿನ್ನಡೆಯಾಗುವುದಂತೂ ಖಚಿತ. ಕಳೆದ ಆವೃತ್ತಿಯಲ್ಲಿ ರಿಯಾನ್ ಪರಾಗ್ ಕೆಲವು ಪಂದ್ಯಗಳನ್ನು ಮುನ್ನಡೆಸಿದ್ದರೆ, ಸೀಸನ್ ಮುಗಿದ ನಂತರ ಯಶಸ್ವಿ ಜೈಸ್ವಾಲ್ ಹಲವಾರು ಸಂದರ್ಶನಗಳಲ್ಲಿ ನಾಯಕತ್ವದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಡೇಜಾ ಅವರನ್ನು ನಾಯಕನನ್ನಾಗಿ ನೇಮಿಸದಿದ್ದರೆ, ಈ ಇಬ್ಬರಲ್ಲಿ ಒಬ್ಬರು ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಅಧಿಕೃತ ಘೋಷಣೆಯಾಗುವವರೆಗೆ, ಎಲ್ಲಾ ಆಯ್ಕೆಗಳು ಮುಕ್ತವಾಗಿರುತ್ತವೆ.