
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ದೇವದತ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಏಕೆಂದರೆ ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿ ಟೂರ್ನಿಯ ಮೂಲಕ ಪಡಿಕ್ಕಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಆರ್ಸಿಬಿ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಕೊನೆಯ ಪಂದ್ಯಗಳ ವೇಳೆ ಗಾಯಗೊಂಡಿದ್ದರು. ಹೀಗಾಗಿ ಅವರ ಬದಲಿಗೆ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇತ್ತ ಬದಲಿಯಾಗಿ ಎಂಟ್ರಿ ಕೊಟ್ಟಿದ್ದ ಮಯಾಂಕ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು.

ಹೀಗಾಗಿ ಮುಂದಿನ ಸೀಸನ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಆದರೀಗ ಮಹಾರಾಜ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ದೇವದತ್ ಪಡಿಕ್ಕಲ್ ತನ್ನ ಭರ್ಜರಿ ಫಾರ್ಮ್ ಅನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಆರ್ಸಿಬಿ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯೇ ಇಲ್ಲ ಎನ್ನಬಹುದು.

ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ 12 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ದೇವದತ್ ಪಡಿಕ್ಕಲ್ 4 ಅರ್ಧಶತಕಗಳೊಂದಿಗೆ ಒಟ್ಟು 449 ರನ್ ಕಲೆಹಾಕಿದ್ದಾರೆ. ಇದರ ನಡುವೆ 17 ಸಿಕ್ಸ್ ಹಾಗೂ 51 ಫೋರ್ಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.

ಅತ್ತ ಕಳೆದ ಸೀಸನ್ನಲ್ಲಿ RCB ಪರ 10 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ 2 ಅರ್ಧಶತಕಗಳೊಂದಿಗೆ 247 ರನ್ ಕಲೆಹಾಕಿದ್ದರು. ಇದೀಗ ಮಹಾರಾಜ ಟೂರ್ನಿಯಲ್ಲಿ 154.83ರ ಸ್ಟ್ರೇಕ್ ರೇಟ್ನಲ್ಲಿ 449 ರನ್ ಗಳಿಸಿದ್ದಾರೆ. ಈ ಭರ್ಜರಿ ಪ್ರದರ್ಶನದೊಂದಿಗೆ ದೇವದತ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಿಟೈನ್ ಆಟಗಾರರ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.