
ವಿಜಯ್ ಹಜಾರೆ ಟ್ರೋಫಿಯ ಮೂರನೇ ಸುತ್ತಿನಲ್ಲಿ ಮಧ್ಯಪ್ರದೇಶ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮಧ್ಯಪ್ರದೇಶ ಪರ ಕಣಕ್ಕಿಳಿದಿದ್ದ ಸ್ಟಾರ್ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ನೀರಸ ಪ್ರದರ್ಶನ ನೀಡಿದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಕೇವಲ 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಇದುವರೆಗೆ 3 ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಲ್ಲೂ ವೆಂಕಟೇಶ್ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಈ ಪಂದ್ಯಕ್ಕೂ ಮುನ್ನ ನಡೆದ ಮೊದಲೆರಡು ಪಂದ್ಯಗಳಲ್ಲಿ ವೆಂಕಟೇಶ್ ಉತ್ತಮ ಆರಂಭ ಪಡೆದರಾದರೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸುವಲ್ಲಿ ವಿಫಲರಾಗಿದ್ದಾರೆ.

ರಾಜಸ್ಥಾನ್ ವಿರುದ್ಧದ ಮೊದಲ ಪಂದ್ಯದಲ್ಲಿ 34 ರನ್ಗಳ ಇನ್ನಿಂಗ್ಸ್ ಆಡಿದ್ದ ವೆಂಕಟೇಶ್ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ. ಇದೇ ರೀತಿ ತಮಿಳುನಾಡು ವಿರುದ್ಧದ ಪಂದ್ಯದಲ್ಲೂ ವೆಂಕಟೇಶ್ 32 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

ವಾಸ್ತವವಾಗಿ ಮುಂಬರುವ ಐಪಿಎಲ್ನಲ್ಲಿ ವೆಂಕಟೇಶ್ ಅಯ್ಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಐಪಿಎಲ್ 2026 ರ ಮಿನಿ-ಹರಾಜಿನಲ್ಲಿ ಆರ್‌ಸಿಬಿ, ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿಗೆ ಖರೀದಿಸಿತು.

ಈ ಹಿಂದಿನ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ ಬರೋಬ್ಬರಿ 23.75 ಕೋಟಿ ನೀಡಿ ಖರೀದಿಸಿತ್ತು. ಆದರೆ ವೆಂಕಟೇಶ್ ಅವರ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಅವರನ್ನು ಕೆಕೆಆರ್ ಕೈಬಿಟ್ಟಿತ್ತು. ಇದೀಗ ಆರ್‌ಸಿಬಿ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ. ಅಲ್ಲದೆ ವೆಂಕಟೇಶ್ಗೆ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶವೂ ಸಿಗಲಿದೆ.

ಆದರೆ ಪ್ರಸ್ತುತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವೆಂಕಟೇಶ್ ಆರ್ಸಿಬಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಾರಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ. ಆದಾಗ್ಯೂ ವೆಂಕಟೇಶ್ ಬದಲಿಯಾಗಿ ತಂಡದಲ್ಲಿ ಬೇರೆ ಆಯ್ಕೆಗಳಿದ್ದು ಒಂದು ವೇಳೆ ವೆಂಕಟೇಶ್ ಉತ್ತಮ ಪ್ರದರ್ಶನ ನೀಡದಿದ್ದರೆ ಅವರ ಬದಲಿಯಾಗಿ ಬೇರೆಯವರಿಗೆ ಅವಕಾಶ ಸಿಗಲಿದೆ.