
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಾದೋ ಇಲ್ಲವೋ ಎಂಬುದರ ಇದೀಗ ಮತ್ತೊಂದು ತಾಜಾ ಸುದ್ದಿಯೊಂದು ಹೊರಬಿದ್ದಿದೆ. ಅದೆನೇಂದರೆ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಫ್ರಾಂಚೈಸಿಗೆ ಹೊಸ ಮಾಲೀಕ ಸಿಗುವುದು ಖಚಿತವಾಗಿದೆ.

ಈ ಮೊದಲೇ ವರದಿಯಾದಂತೆ, ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ತಂಡದ ಹಾಲಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮಾರಾಟ ಮಾಡಲು ಮುಂದಾಗಿದೆ. ಕಳೆದ ನವೆಂಬರ್‌ನಲ್ಲಿಯೇ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ತಂಡವನ್ನು ಮಾರಾಟಕ್ಕೆ ಇಟ್ಟಿತ್ತು. ಇದಾದ ಬಳಿಕ ಕೆಲವು ಕಂಪನಿಗಳು ಕೂಡ ಆರ್‌ಸಿಬಿ ಖರೀದಿಗೆ ಮುಂದಾಗಿದ್ದವು.

ಇದೀಗ ಹೊರಬಿದ್ದಿರುವ ಖಚಿತ ಮಾಹಿತಿಯ ಪ್ರಕಾರ, ಔಷಧ ಉದ್ಯಮಿ ಆದರ್ ಪೂನವಲ್ಲ ಆರ್‌ಸಿಬಿ ಫ್ರಾಂಚೈಸಿಯನ್ನು ತಮ್ಮ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನ ಶುರು ಮಾಡಿದ್ದಾರೆ. ಸ್ವತಃ ಈ ವಿಚಾರವನ್ನು ಪೂನವಲ್ಲ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಖಚಿತಪಡಿಸಿದ್ದು, ಆರ್‌ಸಿಬಿಯನ್ನು ಖರೀದಿಸಲು ಬಿಡ್ ಮಾಡುವುದಾಗಿ ಹೇಳಿದ್ದಾರೆ.

ಆರ್‌ಸಿಬಿ ಫ್ರಾಂಚೈಸಿ ಮಾರಾಟಕ್ಕಿದೆ. ಹೀಗಾಗಿ ಆರ್‌ಸಿಬಿ ಖರೀದಿಗೆ ಎಷ್ಟು ಸಾಧ್ಯವೋ ಅಷ್ಟು ಕಠಿಣ ಪ್ರಯತ್ನ, ಬಲವಾದ ಬಿಡ್ ಮಾಡುವುದಾಗಿ ಆದಾರ್ ಪೂನವಾಲ್ಲಾ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ ಅವರು ಆರ್‌ಸಿಬಿ ಖರೀದಿಗಾಗಿ ಎಷ್ಟು ಹಣವನ್ನು ಖರ್ಚು ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ವರದಿಗಳ ಪ್ರಕಾರ ಆರ್‌ಸಿಬಿ 18,000 ಕೋಟಿಯಿಂದ 20,000 ಕೋಟಿಗೆ ಮಾರಾಟವಾಗುವ ನಿರೀಕ್ಷೆಯನ್ನು ಹಾಲಿ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಹೊಂದಿದೆ. ಇದಕ್ಕೆ ಕಾರಣವೂ ಇದ್ದು ಆರ್‌ಸಿಬಿ ಹಾಲಿ ಚಾಂಪಿಯನ್ ಮಾತ್ರವಲ್ಲದೆ ಇದರ ಜನಪ್ರಿಯತೆ ಇದೀಗ ದುಪ್ಪಟ್ಟಾಗಿದೆ. ಹಾಗೆಯೇ ಈ ಫ್ರಾಂಚೈಸಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನರಂತಹ ಲೆಜೆಂಡರಿ ಆಟಗಾರರು ಆಡುತ್ತಿರುವುದರಿಂದ ಐಪಿಎಲ್‌ನಲ್ಲಿ ಇದು ಅತ್ಯಂತ ದುಬಾರಿ ತಂಡಗಳಲ್ಲಿ ಒಂದಾಗಿದೆ.

ಔಷಧ ಉದ್ಯಮಿ ಆದಾರ್ ಪೂನವಾಲ್ಲಾ ಭಾರತದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಸಂಪತ್ತು ಸುಮಾರು 2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಆದಾರ್ ಪೂನವಾಲ್ಲಾ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಗಿದ್ದು, ಇದೀಗ ಐಪಿಎಲ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.