- Kannada News Photo gallery Cricket photos Rcb holds ipls highest and lowest total record on april 23 kannada news zp au50
IPL 2023: ಏಪ್ರಿಲ್ 23 ಮತ್ತು RCB ತಂಡದ 3 ದಾಖಲೆಗಳು: ಇವತ್ತಿನ ಕಥೆಯೇನು?
IPL 2023 RCB vs RR: ಏಪ್ರಿಲ್ 23 ರಂದೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಹೀಗಾಗಿಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಯಾವ ದಾಖಲೆ ಬರೆಯಲಿದೆ ಎಂಬುದೇ ಈಗ ಕುತೂಹಲ.
Updated on:Apr 23, 2023 | 2:48 PM

IPL 2023: ಐಪಿಎಲ್ ಇತಿಹಾಸದ ಅತ್ಯಂತ ಗರಿಷ್ಠ ಸ್ಕೋರ್ ಯಾವುದು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ 263. ಕಳೆದ 10 ಸೀಸನ್ ಐಪಿಎಲ್ನಿಂದ ಯಾರಿಂದಲೂ ಮುರಿಯಲು ಸಾಧ್ಯವಾಗದ ಇಂತಹದೊಂದು ದಾಖಲೆ ನಿರ್ಮಿಸಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB).

2013 ರ ಏಪ್ರಿಲ್ 23 ರಂದು ಆರ್ಸಿಬಿ ಹಾಗೂ ಪುಣೆ ವಾರಿಯರ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಪುಣೆ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕನ ನಿರ್ಧಾರ ತಪ್ಪು ಎನ್ನುವಂತೆ ಆರ್ಸಿಬಿ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ತಿಲಕರತ್ನೆ ದಿಲ್ಶಾನ್ ಭರ್ಜರಿ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 167 ರನ್ಗಳ ಜೊತೆಯಾಟವಾಡಿದ ಈ ಜೋಡಿ ಅಬ್ಬರಿಸಿದ್ದರು. ಈ ವೇಳೆ ದಿಲ್ಶಾನ್ ಕಲೆಹಾಕಿದ್ದು ಕೇವಲ 33 ರನ್ ಮಾತ್ರ. ಅಂದರೆ ಅದಾಗಲೇ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು.

ಶತಕದ ಬಳಿಕ ಮತ್ತಷ್ಟು ಅಬ್ಬರಿಸಿದ ಗೇಲ್ 17 ಭರ್ಜರಿ ಸಿಕ್ಸ್ ಹಾಗೂ 13 ಫೋರ್ನೊಂದಿಗೆ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಇದರೊಂದಿಗೆ ಆರ್ಸಿಬಿ ತಂಡದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 263 ಕ್ಕೆ ಬಂದು ನಿಂತಿತು. ಇದು ಐಪಿಎಲ್ ಇತಿಹಾಸದ ಮೂಡಿಬಂದ ಗರಿಷ್ಠ ಸ್ಕೋರ್ ಆಗಿದೆ.

ಇಂತಹದೊಂದು ಐತಿಹಾಸಿಕ ದಾಖಲೆ ಬರೆದ ಆರ್ಸಿಬಿ ಕೆಲ ವರ್ಷಗಳ ಬೆನ್ನಲ್ಲೇ ಅತ್ಯಂತ ಕೆಟ್ಟ ದಾಖಲೆಯನ್ನೂ ಕೂಡ ತನ್ನದಾಗಿಸಿಕೊಂಡಿತ್ತು ಎಂಬುದು ವಿಶೇಷ. ಅಂದರೆ 2017 ರಲ್ಲಿ ಆರ್ಸಿಬಿ ತಂಡವು ಕೆಕೆಆರ್ ನೀಡಿದ 131 ರನ್ಗಳ ಗುರಿಯನ್ನು ಬೆನ್ನತ್ತಿ ಕೇವಲ 49 ರನ್ಗಳಿಗೆ ಆಲೌಟ್ ಆಯಿತು.

ಈ ವೇಳೆ ಆರ್ಸಿಬಿ ಪರ ಮೂಡಿಬಂದ ಗರಿಷ್ಠ ವೈಯುಕ್ತಿಕ ಸ್ಕೋರ್ 9. ಇದನ್ನು ಬಾರಿಸಿದ್ದು ಕೇದರ್ ಜಾಧವ್. ಅಂದು ಕೇವಲ 49 ರನ್ಗೆ ಆಲೌಟ್ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಸರ್ವಪತನ ಕಂಡ ತಂಡ ಎಂಬ ಕೆಟ್ಟ ದಾಖಲೆಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿತು.

ಅಂದರೆ ಐಪಿಎಲ್ನ ಗರಿಷ್ಠ ಸ್ಕೋರ್ ಹಾಗೂ ಕನಿಷ್ಠ ಸ್ಕೋರ್ ದಾಖಲೆ ಆರ್ಸಿಬಿ ಹೆಸರಿನಲ್ಲಿದೆ. ವಿಶೇಷ ಎಂದರೆ ಈ ಎರಡೂ ದಾಖಲೆಗಳು ಮೂಡಿಬಂದಿರುವುದು ಏಪ್ರಿಲ್ 23 ರಂದು. 2013 ರ ಏಪ್ರಿಲ್ 23 ರಂದು 263 ರನ್ ಬಾರಿಸಿ ದಾಖಲೆ ಬರೆದರೆ, 2017 ರ ಏಪ್ರಿಲ್ 23 ರಂದು 49 ರನ್ಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ನಿರ್ಮಿಸಿತು.

ಅಷ್ಟೇ ಅಲ್ಲದೆ, ಕಳೆದ ಸೀಸನ್ನಲ್ಲಿ ಏಪ್ರಿಲ್ 23 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಪಂದ್ಯದಲ್ಲೂ ಆರ್ಸಿಬಿ ಹೀನಾಯ ಪ್ರದರ್ಶನ ನೀಡಿತ್ತು. ಮುಂಬೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 16.1 ಓವರ್ಗಳಲ್ಲಿ ಕೇವಲ 68 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು 8 ಓವರ್ಗಳಲ್ಲಿ ಈ ಸುಲಭ ಗುರಿಯನ್ನು ಬೆನ್ನತ್ತಿ ಎಸ್ಆರ್ಹೆಚ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಅಂದರೆ ಏಪ್ರಿಲ್ 23 ಆರ್ಸಿಬಿ ದಾಖಲೆಯ ಮೊತ್ತ ಕಲೆಹಾಕಿ ಭರ್ಜರಿ ದಾಖಲೆ ನಿರ್ಮಿಸಿದ್ದರೆ, ಎರಡು ಬಾರಿ ಎರಡಂಕಿ ಮೊತ್ತಕ್ಕೆ ಆಲೌಟ್ ಆಗಿದೆ. ಇದೀಗ ಏಪ್ರಿಲ್ 23 ರಂದೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಹೀಗಾಗಿಯೇ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಯಾವ ದಾಖಲೆ ಬರೆಯಲಿದೆ ಎಂಬುದೇ ಈಗ ಕುತೂಹಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸೋನು ಯಾದವ್, ಅನೂಜ್ ರಾವತ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ
Published On - 2:46 pm, Sun, 23 April 23
