
ಕ್ರೀಡಾ ಕ್ಷೇತ್ರದಲ್ಲಿ ಹೊಸ ಟ್ರೆಂಡ್ ಚಾಲ್ತಿಯಲ್ಲಿದೆ. ಅದು ಚಾಂಪಿಯನ್ ಪಟ್ಟ ಅಲಂಕರಿಸುವ ಟ್ರೆಂಡ್. ಅಂದರೆ ಈವರೆಗೆ ಚಾಂಪಿಯನ್ ಪಟ್ಟ ಮರೀಚಿಕೆಯಾಗಿದ್ದ ತಂಡಗಳು ಈ ವರ್ಷ ಟ್ರೋಫಿಗಳನ್ನು ಎತ್ತಿ ಹಿಡಿಯುತ್ತಿದೆ. ಇನ್ನೂ ಕೆಲ ತಂಡಗಳು ದೀರ್ಘಾವಧಿಯ ಕಾಯುವಿಕೆಯ ಬಳಿಕ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಟ್ರೆಂಡ್ ಕ್ರಿಕೆಟ್ ಕ್ಷೇತ್ರದಲ್ಲೂ ಮುಂದುವರೆದಿರುವುದು ವಿಶೇಷ.

ಅಂದರೆ 2025 ರಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಮೂರು ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂರು ತಂಡಗಳು ಕೂಡ ಒಂದು ಟ್ರೋಫಿಗಾಗಿ ವರ್ಷಾನುಗಟ್ಟಲೆ ಕಾದಿದ್ದರು ಎಂಬುದು ವಿಶೇಷ. ಅದರಂತೆ 2025 ರಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಕ್ರಿಕೆಟ್ ತಂಡಗಳ ಕಿರು ಪರಿಚಯ ಇಲ್ಲಿದೆ...

ಹೊಬಾರ್ಟ್ ಹರಿಕೇನ್ಸ್: ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್ನ ಹಾಲಿ ಚಾಂಪಿಯನ್ ಹೊಬಾರ್ಟ್ ಹರಿಕೇನ್ಸ್ ತಂಡ. ಈ ಬಾರಿಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಹೊಬಾರ್ಟ್ ಹರಿಕೇನ್ಸ್ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದು ಕೂಡ 14 ವರ್ಷಗಳ ಬಳಿಕ. ಅಂದರೆ ಬಿಬಿಎಲ್ ಶುರುವಾಗಿ ಹದಿನಾಲ್ಕು ವರ್ಷಗಳಾಗಿದೆ. ಇದರ ನಡುವೆ ಒಮ್ಮೆಯೂ ಟ್ರೋಫಿ ಗೆಲ್ಲದ ಹೊಬಾರ್ಟ್ ಹರಿಕೇನ್ಸ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ವಿಶೇಷ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್ 18 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ನ ನತದೃಷ್ಟ ತಂಡವೆಂಬ ಹಣೆಪಟ್ಟಿ ಕಳಚಿಕೊಂಡಿದೆ. ಅದು ಕೂಡ 18 ವರ್ಷಗಳ ಬಳಿಕ ಎಂಬುದು ವಿಶೇಷ. ಅಂದರೆ ಕಳೆದ 17 ವರ್ಷಗಳಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಕಾದಿಡಿದ್ದ ಆರ್ಸಿಬಿಗೆ 2025 ರಲ್ಲಿ ವಿಜಯಲಕ್ಷ್ಮಿ ಒಲಿದಿದೆ.

ಸೌತ್ ಆಫ್ರಿಕಾ: ಐಸಿಸಿ ಟೂರ್ನಿಯ ಚೋಕರ್ಸ್ ಎಂದೇ ಅಪಖ್ಯಾತಿಗೆ ಒಳಗಾಗಿದ್ದ ಸೌತ್ ಆಫ್ರಿಕಾ ತಂಡ ಕೂಡ ಟ್ರೋಫಿ ಎತ್ತಿ ಹಿಡಿದಿದೆ. ಅದು ಕೂಡ 27 ವರ್ಷಗಳ ಬಳಿಕ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಸೌತ್ ಆಫ್ರಿಕಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಐಸಿಸಿ ಟ್ರೋಫಿಗಾಗಿ ತನ್ನ 27 ವರ್ಷಗಳ ಕಾಯುವಿಕೆಯನ್ನು ಸೌತ್ ಆಫ್ರಿಕಾ ಅಂತ್ಯಗೊಳಿಸಿದೆ.