IPL 2024: ವರ್ಷದ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ಪಡೆದ RCB
IPL 2024 Auction: ಈ ಬಾರಿಯ ಐಪಿಎಲ್ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಾಗುತ್ತಿದ್ದು, ಇದಾದ ಬಳಿಕವಷ್ಟೇ ಫೈನಲ್ ಪಟ್ಟಿ ಹೊರಬೀಳಲಿದೆ.
Updated on:Dec 05, 2023 | 5:10 PM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಪ್ರಶಸ್ತಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಕಳೆದ 16 ಸೀಸನ್ಗಳಿಂದ ಆರ್ಸಿಬಿ ಚೊಚ್ಚಲ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಪ್ರಯತ್ನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವರ್ಷದ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ದೊರಕಿದೆ.

ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT) - CII ಸ್ಪೋರ್ಟ್ಸ್ ಬಿಸಿನೆಸ್ ಅವಾರ್ಡ್ಸ್ 2023 ರ ಮೊದಲ ಆವೃತ್ತಿಯಲ್ಲಿ ಆರ್ಸಿಬಿಗೆ ಅತ್ಯುತ್ತಮ ಕ್ರೀಡಾ ಫ್ರಾಂಚೈಸ್ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಆರ್ಸಿಬಿ ದೇಶೀಯ ಅಂಗಳದ ಅತ್ಯುತ್ತಮ ಫ್ರಾಂಚೈಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಹುಲ್ ದ್ರಾವಿಡ್, ಜಾಕ್ಸ್ ಕಾಲಿಸ್, ಅನಿಲ್ ಕುಂಬ್ಳೆ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಶೇನ್ ವಾಟ್ಸನ್, ವಿರಾಟ್ ಕೊಹ್ಲಿಯಂತಹ ಅತಿರಥ ಮಹಾರಥರು ಪ್ರತಿನಿಧಿಸಿರುವ ಆರ್ಸಿಬಿ ತಂಡಕ್ಕೆ ಪ್ರಶಸ್ತಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಇದಾಗ್ಯೂ ಈ ಬಾರಿ ಪ್ರಶಸ್ತಿ ಗೆಲ್ಲಲು ಆರ್ಸಿಬಿ ಬಲಿಷ್ಠ ಪಡೆಯನ್ನು ರೂಪಿಸುವ ಇರಾದೆಯಲ್ಲಿದೆ.

ಇದಕ್ಕಾಗಿ ತಂಡದ ಮ್ಯಾನೇಜ್ಮೆಂಟ್ನಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಬದಲಿಗೆ ಆ್ಯಂಡಿ ಫ್ಲವರ್ ಅವರನ್ನು ಕರೆತರಲಾಗಿದೆ. ಹಾಗೆಯೇ ತಂಡದ ಡೈರೆಕ್ಟರ್ ಆಗಿ ಮೈಕ್ ಹಸ್ಸನ್ ಸ್ಥಾನದಲ್ಲಿ ಮೊ ಬೊಬಟ್ ಅವರನ್ನು ನೇಮಿಸಲಾಗಿದೆ.

ಇದಲ್ಲದೆ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ಒಟ್ಟು 19 ಆಟಗಾರರನ್ನು ಉಳಿಸಿಕೊಂಡಿದೆ. ಅಲ್ಲದೆ 11 ಆಟಗಾರರನ್ನು ಬಿಡುಗಡೆ ಮಾಡಿ ಬಿಡ್ಡಿಂಗ್ಗಾಗಿ ಬಿಗ್ ಪ್ಲ್ಯಾನ್ ರೂಪಿಸುತ್ತಿದೆ. ಈ ಮೂಲಕ ಐಪಿಎಲ್ ಸೀಸನ್ 17 ಗಾಗಿ ಆರ್ಸಿಬಿ ಬಲಿಷ್ಠ ಪಡೆಯನ್ನು ರೂಪಿಸುವ ಇರಾದೆಯಲ್ಲಿದೆ.

ಆರ್ಸಿಬಿ ತಂಡದಿಂದ ಕೈ ಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

RCB ಉಳಿಸಿಕೊಂಡಿರುವ ಆಟಗಾರರ ಪಟ್ಟಿ: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್ (ಟ್ರೇಡ್), ಮಯಾಂಕ್ ಡಗಾರ್ (ಟ್ರೇಡ್).
Published On - 5:08 pm, Tue, 5 December 23



















