- Kannada News Photo gallery Cricket photos Rishabh Pant's all overseas Test tons resulted in India's loss
ರಿಷಭ್ ಪಂತ್ ಸೆಂಚುರಿ ಸಿಡಿಸಿದರೆ ಟೀಮ್ ಇಂಡಿಯಾಗೆ ಸೋಲು ಕಟ್ಟಿಟ್ಟ ಬುತ್ತಿ..!
Rishabh Pant: ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 134 ರನ್ ಬಾರಿಸಿದ್ದ ಪಂತ್, ದ್ವಿತೀಯ ಇನಿಂಗ್ಸ್ನಲ್ಲಿ 118 ರನ್ ಕಲೆಹಾಕಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ವಿಶ್ವದ 2ನೇ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು.
Updated on: Jun 26, 2025 | 12:54 PM

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿದೇಶದಲ್ಲಿ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ..! ಇಂತಹದೊಂದು ವಿತಂಡ ವಾದ ಮುನ್ನಲೆಗೆ ಬರಲು ಮುಖ್ಯ ಕಾರಣ ಪಂತ್ ಶತಕ ಬಾರಿಸಿದಾಗ ಭಾರತ ತಂಡ ಈವರೆಗೆ ಗೆಲ್ಲದಿರುವುದು. ಅಂದರೆ ರಿಷಭ್ ಪಂತ್ ವಿದೇಶದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದಾಗ ಟೀಮ್ ಇಂಡಿಯಾ ಒಮ್ಮೆಯೂ ಗೆದ್ದಿಲ್ಲ.

ರಿಷಭ್ ಪಂತ್ ಬ್ಯಾಟ್ನಿಂದ ಮೊದಲ ವಿದೇಶಿ ಟೆಸ್ಟ್ ಶತಕ ಮೂಡಿಬಂದಿದ್ದು 2018 ರಲ್ಲಿ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಪಂತ್ 114 ರನ್ ಬಾರಿಸಿದರೂ ಭಾರತ ತಂಡ ಪಂದ್ಯ ಗೆದ್ದಿರಲಿಲ್ಲ. ಇದಾದ ಬಳಿಕ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ಅಜೇಯ 159 ರನ್ ಬಾರಿಸಿದ್ದರು. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು.

ಇನ್ನು 2022 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ನ್ಯೂಲಾಂಡ್ಸ್ ಮೈದಾನದಲ್ಲಿ ರಿಷಭ್ ಪಂತ್ ಅಜೇಯ ಶತಕ ಸಿಡಿಸಿದ್ದರು. ಈ ಮ್ಯಾಚ್ನಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿತ್ತು. ಇನ್ನು 2022 ರಲ್ಲಿ ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂತ್ 146 ರನ್ಗಳ ಇನಿಂಗ್ಸ್ ಆಡಿದ್ದರು. ಈ ವೇಳೆಯೂ ಭಾರತ ತಂಡಕ್ಕೆ ಗೆಲುವು ದಕ್ಕಿರಲಿಲ್ಲ.

ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದಾರೆ. ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 134 ರನ್ ಬಾರಿಸಿದ್ದ ಪಂತ್, ದ್ವಿತೀಯ ಇನಿಂಗ್ಸ್ನಲ್ಲಿ 118 ರನ್ ಕಲೆಹಾಕಿದ್ದರು. ಹೀಗೆ ಎರಡು ಶತಕಗಳನ್ನು ಬಾರಿಸಿದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಜಯ ಸಾಧಿಸಿಲ್ಲ.

ಅಂದರೆ ವಿದೇಶದಲ್ಲಿ ರಿಷಭ್ ಪಂತ್ ಬಾರಿಸಿದ 6 ಟೆಸ್ಟ್ ಶತಕಗಳಲ್ಲಿ 5 ವ್ಯರ್ಥವಾಗಿದೆ. ಏಕೆಂದರೆ ಆ ಐದು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಇನ್ನು ಪಂತ್ ಬಾರಿಸಿದ ಒಂದು ಶತಕದ ನೆರವಿನೊಂದಿಗೆ ಭಾರತ ತಂಡವು ಪಂದ್ಯವೊಂದನ್ನು ಡ್ರಾ ಮಾಡಿಕೊಂಡಿದೆ. ಅಂದರೆ ಇಲ್ಲಿ ರಿಷಭ್ ಪಂತ್ ವಿದೇಶದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದಾಗ ಟೀಮ್ ಇಂಡಿಯಾ ಒಮ್ಮೆಯೂ ಗೆಲುವು ದಾಖಲಿಸಿಲ್ಲ. ಹೀಗಾಗಿಯೇ ಪಂತ್ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ವಾದವನ್ನು ಮುಂದಿಡಲಾಗುತ್ತಿದೆ.

ಇನ್ನು ಟೆಸ್ಟ್ನಲ್ಲಿ ಅತ್ಯಧಿಕ ಶತಕ ವ್ಯರ್ಥವಾಗಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರದ್ದು. ಟೀಮ್ ಇಂಡಿಯಾ ಸೋತ 56 ಪಂದ್ಯಗಳಲ್ಲಿ ಸಚಿನ್ 11 ಶತಕಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಟೀಮ್ ಇಂಡಿಯಾ ಸೋತಿರುವ 39 ಮ್ಯಾಚ್ಗಳಲ್ಲಿ ಕೊಹ್ಲಿ 7 ಸೆಂಚುರಿ ಸಿಡಿಸಿದ್ದರು. ಇದೀಗ ಭಾರತ ತಂಡ ಸೋತ 18 ಟೆಸ್ಟ್ ಪಂದ್ಯಗಳಲ್ಲಿ ರಿಷಭ್ ಪಂತ್ 5 ಸೆಂಚುರಿ ಸಿಡಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.









