5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಪುನರಾಗಮನ ಮಾಡಿದೆ. ಅಡಿಲೇಡ್ ಟೆಸ್ಟ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿರುವ ಆಸ್ಟ್ರೇಲಿಯ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಈ ಪಂದ್ಯದ ಸೋಲಿಗೆ ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳೇ ಪ್ರಮುಖ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ತಂಡದ ಸೋಲಿಗೆ ಮೊದಲ ಕಾರಣವೆಂದರೆ, ಅದು ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕ ರೋಹಿತ್ ತೆಗೆದುಕೊಂಎಡ ನಿರ್ಧಾರ ಸರಿ ಇರಲಿಲ್ಲ ಎಂಬುದು ಮೊದಲ ಸೆಷನ್ನಲ್ಲೇ ಬಹಿರಂಗಗೊಂಡಿತ್ತು. ಪಂದ್ಯಕ್ಕೂ ಮುನ್ನ ಮೋಡ ಕವಿದ ವಾತಾವರಣವಿತ್ತು. ಇದರ ಲಾಭ ಪಡೆದ ಸ್ಟಾರ್ಕ್ ಟೀಂ ಇಂಡಿಯಾ ಆಟಗಾರರಿಗೆ ಬಹಿರಂಗವಾಗಿ ಆಡುವ ಅವಕಾಶವನ್ನೇ ನೀಡಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವುದು ತಪ್ಪು ನಿರ್ಧಾರವಾದರೆ ಟೀಂ ಇಂಡಿಯಾ ತಂಡ ಆಯ್ಕೆಯಲ್ಲೂ ತಪ್ಪು ಮಾಡಿದೆ. ಈ ಟೆಸ್ಟ್ಗೆ ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಬೇಕು ಎಂದು ಈಗಾಗಲೇ ಹೇಳಲಾಗಿತ್ತು. ಇದಕ್ಕೆ ಕಾರಣ ಪರ್ತ್‌ನಲ್ಲಿ ಹರ್ಷಿತ್ ಮಾಡಿದ ತಪ್ಪುಗಳಲ್ಲ, ಆದರೆ ಗುಲಾಬಿ ಚೆಂಡಿಗೆ ಬೇಕಾದ ಕೌಶಲ್ಯ. ಆಕಾಶ್ ದೀಪ್ ಗುಲಾಬಿ ಚೆಂಡಿನಲ್ಲಿ ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಗಳಿತ್ತು.
ಕೆಲವು ಸಮಯದಿಂದ, ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳ ವೈಫಲ್ಯವು ದೊಡ್ಡ ಚಿಂತೆಯಾಗಿ ಹೊರಹೊಮ್ಮಿದೆ. ಪರ್ತ್ ಟೆಸ್ಟ್‌ನಲ್ಲಿ ಬಲಿಷ್ಠ ಇನ್ನಿಂಗ್ಸ್ ಆಡಿದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ದಯನೀಯವಾಗಿ ವಿಫಲರಾದರು. ಇದರ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮರೆತವರಂತೆ ವರ್ತಿಸಿದ್ದು ತಂಡದ ಹೀನಾಯ ಸ್ಥಿತಿಗೆ ಪ್ರಮುಖ ಕಾರಣವಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿ ಕಾಣಿಸಿಕೊಂಡ ಬುಮ್ರಾ ಪ್ರಮುಖ 4 ವಿಕೆಟ್ ಪಡೆದರು. ಆದರೆ ನಾಯಕ ರೋಹಿತ್ ಶರ್ಮಾ ಅವರನ್ನು ಬಳಸಿಕೊಂಡ ರೀತಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡನೇ ದಿನದ ಮೊದಲ ಸೆಷನ್‌ನ ಆರಂಭದಲ್ಲಿ ಬುಮ್ರಾ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಕ್ಕೆ ತೊಂದರೆ ನೀಡಿದ್ದರು.
ಆದರೆ ಆ ಸೆಷನ್ನಲ್ಲಿ ಬುಮ್ರಾ ಕೇವಲ 4 ಓವರ್ ಮಾತ್ರ ಬೌಲ್ ಮಾಡಿದರು. ಇನ್ನೊಂದು ಕಡೆಯಿಂದ ಹರ್ಷಿತ್ ರಾಣಾ ಸರಾಗವಾಗಿ ರನ್ ಬಿಟ್ಟುಕೊಡುತ್ತಿದ್ದರೂ, ನಾಯಕ ರೋಹಿತ್, ಬುಮ್ರಾ ಅವರನ್ನು ಬೌಲಿಂಗ್ಗೆ ಇಳಿಸಲಿಲ್ಲ. ಇತ್ತ ಮೊಹಮ್ಮದ್ ಸಿರಾಜ್ ತುಂಬಾ ತಡವಾಗಿ ತಮ್ಮ ಲಯವನ್ನು ಕಂಡುಕೊಂಡಿದ್ದು ತಂಡಕ್ಕೆ ತುಂಬಾ ದುಬಾರಿಯಾಯಿತು.