- Kannada News Photo gallery Cricket photos Rohit Sharma hugged Virat Kohli and appreciated his innings after RCB vs Mumbai Indians IPL 2023 Match
Virat Kohli RCB: ಮುಂಬೈ ಸೋತ ತಕ್ಷಣ ವಿರಾಟ್ ಕೊಹ್ಲಿ ಬಳಿ ಬಂದು ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Rohit Sharma, RCB vs MI: ಐಪಿಎಲ್ 2023 ರ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಬಳಿ ಬಂದಿದ್ದಾರೆ. ಈ ಸಂದರ್ಭ ಏನಾಯಿತು ನೋಡಿ.
Updated on:Apr 03, 2023 | 8:19 AM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುದು ಮುಂಬೈ ಇಂಡಿಯನ್ಸ್ಗೆ ಹೊಸದೇನು ಅಲ್ಲ. ಕಳೆದ 11 ಸೀಸನ್ಗಳಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಸತತವಾಗಿ ಸೋಲುತ್ತಲೇ ಬಂದಿದೆ. ಐಪಿಎಲ್ 2023 ರಲ್ಲಿ ಕೂಡ ಅದು ಮುಂದುವರೆಯಿತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರೋಹಿತ್ ಪಡೆ ಸೋಲುಂಡಿತು.

ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ಅವರ ಅಮೋಘ ಬ್ಯಾಟಿಂಗ್ ವೈಭವದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿತು.

ಮುಂಬೈ ನೀಡಿದ್ದ 172 ರನ್ಗಳ ಟಾರ್ಗೆಟ್ ಬೆನ್ನಟ್ಟಲು ಬಂದ ವಿರಾಟ್ ಕೊಹ್ಲಿ ಹಾಗೂ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಫಾಫ್ ಅಬ್ಬರಿಸಿದರೆ ನಂತರ ವಿರಾಟ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಸಿಕ್ಸರ್ ಮೂಲಕ ಕೊಹ್ಲಿ ವಿನ್ನಿಂಗ್ ಶಾಟ್ ಹೊಡೆದಿದ್ದು ಅದ್ಭುತವಾಗಿತ್ತು.

49 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಫೋರ್ ಹಾಗೂ 5 ಸಿಕ್ಸರ್ಗಳ ಮೂಲಕ ಅಜೇಯ 82 ರನ್ ಚಚ್ಚಿದರು. ಕೊಹ್ಲಿ ಅವರ ಈ ಆಟಕ್ಕೆ ಮನಸೋತ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಅವರ ಬಳಿ ಬಂದು ತಬ್ಬಿಕೊಂಡಿದ್ದಾರೆ. ನಿಮ್ಮ ಆಟ ಅತ್ಯುತ್ತಮವಾಗಿತ್ತು ಎಂದು ಹೇಳಿದ್ದಾರೆ.

ಎದುರಾಳಿ ನಾಯಕ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿ ಬಳಿ ಬಂದು ತಬ್ಬಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, 4 ವರ್ಷಗಳ ಬಳಿಕ ತವರಿನಲ್ಲಿ ಆಡಿ ಜಯ ಸಾಧಿಸಿದ್ದು ತುಂಬಾ ಖುಷಿ ನೀಡಿದೆ. ಇದಕ್ಕಿಂತ ಉತ್ತಮ ಪಂದ್ಯ ಇದೆಯೇ ಎಂದು ಹೇಳಲು ಸಾಧ್ಯವಿಲ್ಲ. ಮೊದಲು 17 ಓವರ್ ನಮ್ಮ ಬೌಲಿಂಗ್ ಅದ್ಭುತವಾಗಿತ್ತು. ಕೊನೆಯ 3 ಓವರ್ನ ಕ್ರೆಡಿಟ್ ತಿಲಕ್ ವರ್ಮಾಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ಚಿನ್ನಸ್ವಾಮಿಯಲ್ಲಿ ಕ್ರೌಡ್ ಮಾತ್ರ ಅದ್ಭುತವಾಗಿತ್ತು. ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಿದೆ. ನಾವು ಉತ್ತಮ ಆರಂಭ ಪಡೆದುಕೊಳ್ಳುವುದು ಮುಖ್ಯವಾಗಿತ್ತು. ಇದಕ್ಕೆ ಅಭಿಮಾನಿಗಳ ಬೆಂಬಲ ಬೇಕು. ಅದು ಸಿಕ್ಕಿದೆ. ಕರ್ಣ್ ಶರ್ಮಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ನೆಟ್ನಲ್ಲಿ ಕೂಡ ಅವರು ನಮಗೆ ಸಿಕ್ಸರ್ ಹೊಡೆಯುವಂತಹ ಬಾಲ್ ಹಾಕುವುದಿಲ್ಲ - ಕೊಹ್ಲಿ.

8 ವಿಕೆಟ್ಗಳ ಜಯದೊಂದಿಗೆ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಆಡಿದ ಕಳೆದ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿದ ಸಾಧನೆ ಮಾಡಿತು. ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಮೂರನೇ ಜಯ ತನ್ನದಾಗಿಸಿತು.
Published On - 8:19 am, Mon, 3 April 23




