
ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ದೇಶೀ ಟೂರ್ನಿ ರಣಜಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ಆದರೆ ದೇಶೀ ಟೂರ್ನಿಯಲ್ಲೂ ರೋಹಿತ್ಗೆ ತಮ್ಮ ಹಳೆಯ ಫಾರ್ಮ್ ಅನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.

ಬಿಸಿಸಿಐ ಆದೇಶದ ಬಳಿಕ 10 ವರ್ಷಗಳ ನಂತರ ದೇಶೀ ಅಂಗಳಕ್ಕೆ ಕಾಲಿಟ್ಟಿದ್ದ ರೋಹಿತ್ ಶರ್ಮಾ, ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 3 ರನ್ಗಳಿಗೆ ಸುಸ್ತಾಗಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ 28 ರನ್ ಬಾರಿಸಿದ್ದರು.

ಟೆಸ್ಟ್ ಮಾದರಿಯಲ್ಲಿ ಮತ್ತೊಮ್ಮೆ ಲಯ ಕಂಡುಕೊಳ್ಳುವುದಾಕ್ಕಿಯೇ ಅಖಾಡಕ್ಕಿಳಿದಿದ್ದ ರೋಹಿತ್ ಆಡಿದ ಎರಡೂ ಇನ್ನಿಂಗ್ಸ್ಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲಾದರೂ ರೋಹಿತ್ ಫಾರ್ಮ್ಗೆ ಮರಳಲ್ಲಿ ಎಂದು ಆಶಿಸುತ್ತಿದ್ದರು. ಆದರೀಗ ವರದಿಯಾಗಿರುವಂತೆ ರಣಜಿ ಟೂರ್ನಿಯಿಂದ ಹಿಂದೆ ಸರಿಯಲು ರೋಹಿತ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ನಂತರ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುತ್ತಿರುವ ಕಾರಣ ರೋಹಿತ್ ರಣಜಿ ಟ್ರೋಫಿಯಲ್ಲಿ ಇನ್ನು ಮುಂದೆ ಆಡದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮುಂಬೈ ತಂಡದ ಮ್ಯಾನೇಜ್‌ಮೆಂಟ್‌ಗೂ ತಿಳಿಸಿದ್ದಾರೆ. ರೋಹಿತ್ ಜೊತೆಗೆ ಯಶಸ್ವಿ ಜೈಸ್ವಾಲ್ ಕೂಡ ಇಂಗ್ಲೆಂಡ್ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ತಯಾರಿ ನಡೆಸುವ ಸಲುವಾಗಿ ರಣಜಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ವರದಿ ಮಾಡಿದೆ.

ಮುಂಬೈ ತಂಡವು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡಿತ್ತು. ಆದರೆ ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯವನ್ನು ಜಮ್ಮು ಮತ್ತು ಕಾಶ್ಮೀರ ತಂಡ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.