- Kannada News Photo gallery Cricket photos Phil Salt and Liam Livingstone Fails Again in IND vs ENG 2nd T20I 2025
ಸಾಲ್ಟ್-ಸ್ಟೋನ್ ಸಪ್ಪೆ: RCBಗೆ ಚಿಂತೆ ಶುರು..!
IND vs ENG T20I: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯಲ್ಲಿ ಆರ್ಸಿಬಿ ತಂಡದ ಮೂವರು ಆಟಗಾರರು ಕಣಕ್ಕಿಳಿದಿದ್ದಾರೆ. ಈ ಮೂವರು ಆಟಗಾರರು ಜೊತೆಯಾಗಿ ಕಲೆಹಾಕಿದ ಒಟ್ಟು ಸ್ಕೋರ್ 24 ರನ್ಗಳು. ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಜೇಕಬ್ ಬೆಥೆಲ್ ಅವರನ್ನು 2ನೇ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಇನ್ನು ಎರಡೂ ಮ್ಯಾಚ್ನಲ್ಲೂ ಕಾಣಿಸಿಕೊಂಡ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 17 ರನ್ಗಳು ಮಾತ್ರ.
Updated on: Jan 26, 2025 | 1:57 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಸೀಸನ್-18 ಕ್ಕಾಗಿ ಬಲಿಷ್ಠ ಪಡೆಯನ್ನೇ ರೂಪಿಸಿದೆ. ಮೆಗಾ ಹರಾಜಿಗೂ ಮುನ್ನ ಮೂವರನ್ನು ಉಳಿಸಿಕೊಂಡಿದ್ದ ಆರ್ಸಿಬಿ, ಆಕ್ಷನ್ ಮೂಲಕ 19 ಆಟಗಾರರನ್ನು ಖರೀದಿಸಿದೆ. ಈ ಹತ್ತೊಂಬತ್ತು ಆಟಗಾರರಲ್ಲಿ ಇಂಗ್ಲೆಂಡ್ನ ಇಬ್ಬರು ಸ್ಪೋಟಕ ದಾಂಡಿಗರು ಕೂಡ ಇದ್ದಾರೆ. ಹೀಗಾಗಿಯೇ ಈ ಬಾರಿ ಆರ್ಸಿಬಿ ಪರ ಆಂಗ್ಲರ ಆರ್ಭಟವನ್ನು ನಿರೀಕ್ಷಿಸಲಾಗುತ್ತಿದೆ.

ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಭಾರತೀಯ ಪಿಚ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ದಾಂಡಿಗರು ವಿಫಲರಾಗುತ್ತಿದ್ದಾರೆ. ಅದರಲ್ಲೂ ಆರ್ಸಿಬಿಯ ಕಲ್ಲುಪ್ಪು ಜೋಡಿ ಎಂದೇ ಗುರುತಿಸಿಕೊಂಡಿರುವ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಮೊದಲೆರಡು ಪಂದ್ಯಗಳಲ್ಲೂ ಅತ್ಯಂತ ಕಳಪೆ ಪ್ರರ್ದಶನ ನೀಡಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (0) ಅರ್ಷದೀಪ್ ಸಿಂಗ್ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅದು ಸಹ ಮೊದಲ ಓವರ್ನ ಮೂರನೇ ಎಸೆತದಲ್ಲಿ ಎಂಬುದು ವಿಶೇಷ.

ಇದೇ ಪಂದ್ಯದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಎದುರಿಸಿದ್ದು ಕೇವಲ 2 ಎಸೆತಗಳನ್ನು ಮಾತ್ರ. ಅಷ್ಟರಲ್ಲಿ ಲಿವಿಂಗ್ಸ್ಟೋನ್ಗೆ (0) ಪೆವಿಲಿಯನ್ ಹಾದಿ ತೋರಿಸುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾಗಿದ್ದರು. ಅಂದರೆ ಆರ್ಸಿಬಿ ತಂಡದಲ್ಲಿರುವ ಇಬ್ಬರು ಆಟಗಾರರು ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದರು.

ಇನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲೂ ಉಭಯ ದಾಂಡಿಗರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಸಾಲ್ಟ್ ಅರ್ಷದೀಪ್ ಸಿಂಗ್ ಎಸೆತದಲ್ಲಿ ಒಂದು ಫೋರ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಅದು ಕೂಡ ಮೊದಲ ಓವರ್ನಲ್ಲೇ ಎಂಬುದು ಉಲ್ಲೇಖಾರ್ಹ.

ಇದಾದ ಬಳಿಕ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಬಂದ ವೇಗದಲ್ಲೇ ಪೆವಿಲಿಯನ್ಗೆ ಹಿಂತಿರುಗಿದ್ದಾರೆ. 14 ಎಸೆತಗಳನ್ನು ಎದುರಿಸಿದ ಲಿವಿಂಗ್ಸ್ಟೋನ್ 13 ರನ್ಗಳಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಆರ್ಸಿಬಿ ದಾಂಡಿಗರು ಸಂಪೂರ್ಣ ವಿಫಲರಾಗಿರುವುದು ಸ್ಪಷ್ಟ.

ಇಂಟ್ರೆಸ್ಟ್ಟಿಂಗ್ ವಿಷಯ ಎಂದರೆ, ಈ ಬಾರಿ ಆರ್ಸಿಬಿ ಪರ ಇನಿಂಗ್ಸ್ ಆರಂಭಿಸಲಿರುವುದು ಫಿಲ್ ಸಾಲ್ಟ್. ಇನ್ನು ಲಿಯಾಮ್ ಲಿವಿಂಗ್ಸ್ಟೋನ್ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಆದರೀಗ ಭಾರತೀಯ ಪಿಚ್ನಲ್ಲಿ ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಪರದಾಡುತ್ತಿದ್ದಾರೆ. ಈ ಕಳಪೆ ಪ್ರದರ್ಶನವೇ ಇದೀಗ ಆರ್ಸಿಬಿ ತಂಡದ ಬಲಿಷ್ಠತೆಯ ಮೇಲೆ ಪ್ರಶ್ನೆಗಳು ಮೂಡುವಂತೆ ಮಾಡಿದೆ.

ಸದ್ಯ ಎರಡು ಪಂದ್ಯಗಳಲ್ಲಿ ವಿಫಲರಾಗಿರುವ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಮುಂದಿನ ಮೂರು ಪಂದ್ಯಗಳಲ್ಲೂ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ವೇಳೆ ಅಬ್ಬರಿಸುವ ಮೂಲಕ ಆರ್ಸಿಬಿ ಅಭಿಮಾನಿಗಳ ನಿರೀಕ್ಷೆಗಳನ್ನು ಉತ್ತುಂಗಕ್ಕೇರಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
























