
ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ತಂಡದ ನಾಯಕತ್ವ ಕಳೆದುಕೊಂಡಿರುವ ರೋಹಿತ್ ಶರ್ಮಾ, ಇದೀಗ ಸಾಮಾನ್ಯ ಆಟಗಾರನಂತೆ ಕಾಂಗರೂಗಳ ನಾಡಲ್ಲಿ ಬ್ಯಾಟ್ ಬೀಸಲಿದ್ದಾರೆ. 2027 ರ ಏಕದಿನ ವಿಶ್ವಕಪ್ ಆಡಬೇಕೆಂಬ ಇರಾದೆಯಲ್ಲಿರುವ ರೋಹಿತ್ ಈ ಸರಣಿಯಲ್ಲಿ ಅಬ್ಬರಿಸಬೇಕಾಗಿದೆ. ಇದು ಸಾಧ್ಯವಾದರೆ, ರೋಹಿತ್ ಶರ್ಮಾ ಒಂದಲ್ಲ, ಎರಡಲ್ಲ, ಬರೋಬ್ಬರಿ 8 ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ 46 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಈಗಾಗಲೇ 88 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆಯಲು ರೋಹಿತ್ಗೆ ಕೇವಲ 12 ಸಿಕ್ಸರ್‌ಗಳು ಬೇಕಾಗಿವೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಈ ದಾಖಲೆಯನ್ನು ಸೃಷ್ಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ತಮ್ಮ ದಶಕಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ರೋಹಿತ್ ಶರ್ಮಾ ಇದುವರೆಗೆ 49 ಶತಕಗಳನ್ನು ಬಾರಿಸಿದ್ದಾರೆ. ಇದರರ್ಥ ಶತಕಗಳ ಅರ್ಧಶತಕ ಬಾರಿಸಲು ರೋಹಿತ್ಗೆ ಇನ್ನೊಂದು ಶತಕ ಬೇಕಾಗಿದೆ. ಇದುವರೆಗೆ ರೋಹಿತ್ ಟೆಸ್ಟ್‌ನಲ್ಲಿ 12, ಏಕದಿನದಲ್ಲಿ 32 ಮತ್ತು ಟಿ20 ಯಲ್ಲಿ ಐದು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿದರೆ, ಮಹತ್ವದ ಮೈಲಿಗಲ್ಲು ತಲುಪಲಿದ್ದಾರೆ.

ಪರ್ತ್ ಪಂದ್ಯದಲ್ಲಿ ಕಣಕ್ಕಳಿಯುವ ಮೂಲಕ ರೋಹಿತ್ ಶರ್ಮಾ ಭಾರತ ಪರ 500 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಈ ಮೂಲಕ500 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ (664), ವಿರಾಟ್ (550), ಎಂಎಸ್ ಧೋನಿ (535), ರಾಹುಲ್ ದ್ರಾವಿಡ್ (504) ಮೊದಲ 4 ಸ್ಥಾನಗಳಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯಲು ರೋಹಿತ್ ಶರ್ಮಾ ಕೇವಲ ಎಂಟು ಸಿಕ್ಸರ್‌ಗಳ ದೂರದಲ್ಲಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಈ ದಾಖಲೆ ಸೃಷ್ಟಿಸುವ ಅವಕಾಶ ಹೊಂದಿದ್ದಾರೆ. ಪ್ರಸ್ತುತ, ಶಾಹಿದ್ ಅಫ್ರಿದಿ 351 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ 344 ಏಕದಿನ ಸಿಕ್ಸರ್‌ಗಳೊಂದಿಗೆ 2ನೇ ಸ್ಥಾನದಲಿದ್ದಾರೆ.

ಇನ್ನು ಈ ಸರಣಿಯಲ್ಲಿ ರೋಹಿತ್ ಶರ್ಮಾ 196 ರನ್ ಬಾರಿಸಿದರೆ ಏಕದಿನ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಪ್ರಸ್ತುತ, ಸಚಿನ್ ತೆಂಡೂಲ್ಕರ್ (18426) ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (14181) ಎರಡನೇ, ಸೌರವ್ ಗಂಗೂಲಿ (11221) ಮೂರನೇ, ರೋಹಿತ್ ಶರ್ಮಾ (11168) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಹಾಗೆಯೇ ಪರ್ತ್ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಕೇವಲ 10 ರನ್ ಬಾರಿಸಿದರೆ, ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಇದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದರೆ, ಆಸ್ಟ್ರೇಲಿಯಾ ವಿರುದ್ಧ 10 ಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಒಂಬತ್ತು ಏಕದಿನ ಶತಕಗಳನ್ನು ಗಳಿಸಿರುವ ರೋಹಿತ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ (8) ಮತ್ತು ವಿರಾಟ್ ಕೊಹ್ಲಿ (8) ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಈ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ 174 ರನ್ ಬಾರಿಸುವಲ್ಲಿ ಯಶಸ್ವಿಯಾದರೆ, ಏಕದಿನ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.