
ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಟೀಮ್ ಇಂಡಿಯಾ ಪರ ಕಣಕ್ಕಿಳಿದು ಆರು ತಿಂಗಳುಗಳೇ ಕಳೆದಿವೆ. ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್ ಬಳಿಕ ಇಬ್ಬರು ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಇದಕ್ಕೆ ಮುಖ್ಯ ಕಾರಣ ಚಾಂಪಿಯನ್ಸ್ ಟ್ರೋಫಿ ನಂತರ ಭಾರತ ತಂಡವು ಯಾವುದೇ ಏಕದಿನ ಸರಣಿ ಆಡದಿರುವುದು.

ಅಂದರೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇನ್ನು ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆದ ಕಾರಣ ಈ ಟೂರ್ನಿಯಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಂಡಿರಲಿಲ್ಲ.

ಇನ್ನು ಏಷ್ಯಾಕಪ್ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಹೀಗಾಗಿ ಈ ಸರಣಿಯಲ್ಲೂ ರೋಹಿತ್, ವಿರಾಟ್ ಬ್ಯಾಟಿಂಗ್ ನೋಡುವ ಅವಕಾಶ ಅಭಿಮಾನಿಗಳಿಗೆ ದೊರೆಯುವುದಿಲ್ಲ. ಇದಾಗ್ಯೂ ಇದೇ ತಿಂಗಳು ಇಬ್ಬರು ದಿಗ್ಗಜರು ಕಂಬ್ಯಾಕ್ ಮಾಡಲಿರುವುದು ಖಚಿತವಾಗಿದೆ.

ಅಕ್ಟೋಬರ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಲಿರುವುದು ಖಚಿತವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಇಂದು (ಅ.4) ಭಾರತ ತಂಡದ ಘೋಷಣೆಯಾಗಲಿದ್ದು, ಈ ಸರಣಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರೊಂದಿಗೆ ಇದೇ ತಿಂಗಳು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡುವುದು ಕನ್ಫರ್ಮ್ ಆದಂತಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದ್ದು, ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಪಂದ್ಯಗಳನ್ನಾಡಲಿದೆ. ಪರ್ತ್ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯದ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಲಿದ್ದಾರೆ.