
ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದ ಮೂವರು ಹಿರಿಯ ಆಟಗಾರರು ನಿವೃತ್ತಿ ನೀಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಅದರಲ್ಲೂ ಭಾರತ ತಂಡ ಫೈನಲ್ಗೇರುತ್ತಿದ್ದಂತೆ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳುವುದು ಖಚಿತ ಎನ್ನಲಾಗಿತ್ತು.

ಆದರೀಗ ಚಾಂಪಿಯನ್ಸ್ ಟ್ರೋಫಿ ಮುಗಿದಿದೆ. ಟ್ರೋಫಿಯೊಂದಿಗೆ ಟೀಮ್ ಇಂಡಿಯಾ ಆಟಗಾರರು ಭಾರತಕ್ಕೆ ಮರಳಿದ್ದಾರೆ. ಈ ಮರಳುವಿಕೆಯ ಬೆನ್ನಲ್ಲೇ ನಿವೃತ್ತಿ ವಿಚಾರವಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಮೌನ ಮುರಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮಾ, ಸದ್ಯಕ್ಕಂತು ನಾನು ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿತನಕ ನಾನು ಟೀಮ್ ಇಂಡಿಯಾದಲ್ಲಿ ಮುಂದುವರೆಯುತ್ತೇನೆ ಎಂದಿದ್ದಾರೆ. ಈ ಮೂಲಕ 2027ರ ಏಕದಿನ ವಿಶ್ವಕಪ್ ಆಡುವ ಇರಾದೆಯಲ್ಲಿದ್ದಾರೆ ರೋಹಿತ್ ಶರ್ಮಾ.

ಇನ್ನು ನಿವೃತ್ತಿ ಪ್ರಶ್ನೆಗೆ ವಿರಾಟ್ ಕೊಹ್ಲಿ ಕಡೆಯಿಂದಲೂ ಸ್ಪಷ್ಟ ಉತ್ತರ ದೊರಕಿದೆ. ನಾನು ಸಾಧ್ಯವಾದಷ್ಟು ಕ್ರಿಕೆಟ್ ಆಡಲು ಬಯಸುತ್ತೇನೆ. ನನ್ನ ಆಟವನ್ನು ಮತ್ತಷ್ಟು ಸುಧಾರಿಸಲು ಮತ್ತು ಸಾಧ್ಯವಾದಷ್ಟು ಮುಂದಕ್ಕೆ ಹೆಜ್ಜೆಯಿಡಲು ಪ್ರಯತ್ನಿಸುತ್ತೇನೆ. ಅಲ್ಲದೆ ಟೀಮ್ ಇಂಡಿಯಾವನ್ನು ಉತ್ತಮ ಸ್ಥಾನದಲ್ಲಿರಿಸಿದ ಬಳಿಕವಷ್ಟೇ ನಿವೃತ್ತರಾಗುವುದಾಗಿ ಕೊಹ್ಲಿ ಹೇಳಿದ್ದಾರೆ.

ರವೀಂದ್ರ ಜಡೇಜಾ ಕೂಡ ಸದ್ಯಕ್ಕಂತು ನಿವೃತ್ತನಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ನಾನು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಲಿದ್ದೇನೆ ಎಂಬ ವದಂತಿಗಳನ್ನು ಯಾರು ಸಹ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಜಡೇಜಾ ಕೂಡ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿದ್ದಾರೆ.