Updated on: Nov 29, 2022 | 12:23 AM
ವಿಜಯ್ ಹಜಾರೆ ಟೂರ್ನಿಯಲ್ಲಿ ಸೋಮವಾರ ನಡೆದ ಉತ್ತರ ಪ್ರದೇಶ ವಿರುದ್ದದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ದ್ವಿಶತಕ (220) ಸಿಡಿಸಿ ಮಿಂಚಿದ್ದರು. ಅದರಲ್ಲೂ ಒಂದೇ ಓವರ್ನಲ್ಲಿ 7 ಸಿಕ್ಸ್ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದ್ದರು.
ಈ ಭರ್ಜರಿ ಇನಿಂಗ್ಸ್ ಪರಿಣಾಮ ಮಹಾರಾಷ್ಟ್ರ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಉತ್ತರ ಪ್ರದೇಶ ಪರ ಆರ್ಯನ್ ಜುಯೆಲ್ (159) ಭರ್ಜರಿ ಶತಕ ಸಿಡಿಸಿದ್ದರು. ಇದಾಗ್ಯೂ 58 ರನ್ಗಳಿಂದ ಸೋಲೋಪ್ಪಿಕೊಂಡಿತು.
ಈ ಅಮೋಘ ಗೆಲುವಿನ ಬಳಿಕ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಅದ್ಭುತ ಇನಿಂಗ್ಸ್ಗೆ ಲಭಿಸಿದ ಈ ಪ್ರಶಸ್ತಿಯನ್ನು ರುತುರಾಜ್ ಸಹ ಆಟಗಾರನೊಂದಿಗೆ ಹಂಚಿಕೊಳ್ಳುವ ಮೂಲಕ ಎಲ್ಲರ ಹೃದಯ ಗೆದ್ದರು.
ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅದನ್ನು ತಂಡದ ಯುವ ವೇಗದ ಬೌಲರ್ ರಾಜವರ್ಧನ್ ಹಂಗ್ರೇಕರ್ ಅವರಿಗೆ ಹಸ್ತಾಂತರಿಸಿದರು. ಈ ಪಂದ್ಯದಲ್ಲಿ ರಾಜವರ್ಧನ್ 10 ಓವರ್ಗಳಲ್ಲಿ 53 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಗೆಲುವಿನ ಶ್ರೇಯಸ್ಸನ್ನು ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರುತುರಾಜ್ ರಾಜವರ್ಧನ್ ಹಂಗ್ರೇಕರ್ ಜೊತೆ ಹಂಚಿಕೊಂಡರು.
ಇದೀಗ ವಿಶ್ವ ದಾಖಲೆಯ ಇನಿಂಗ್ಸ್ಗೆ ಲಭಿಸಿದ ಪ್ರಶಸ್ತಿಯನ್ನು ಸಹ ಆಟಗಾರನೊಂದಿಗೆ ಹಂಚಿಕೊಳ್ಳುವ ಮೂಲಕ ರುತುರಾಜ್ ಗಾಯಕ್ವಾಡ್ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ನಾಯಕನಾದವನು ಸಹ ಆಟಗಾರನ ಪ್ರದರ್ಶನವನ್ನು ಹೇಗೆ ಪ್ರೋತ್ಸಾಹಿಸಬೇಕೆಂಬುದನ್ನು ರುತುರಾಜ್ ತೋರಿಸಿಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಬಹುಪರಾಕ್ ಅಂದಿದ್ದಾರೆ.
ರುತುರಾಜ್ ಗಾಯಕ್ವಾಡ್-ರಾಜವರ್ಧನ್ ಹಂಗ್ರೇಕರ್