- Kannada News Photo gallery Cricket photos SA vs AFG South Africa lost 7 wickets just 36 runs against Afghanistan
SA vs AFG: 36 ರನ್ಗೆ 7 ವಿಕೆಟ್..! ಅಫ್ಘಾನ್ ವಿರುದ್ಧ ಆಫ್ರಿಕಾ ಪೆವಿಲಿಯನ್ ಪರೇಡ್
SA vs AFG: ದಕ್ಷಿಣ ಆಫ್ರಿಕಾ ವಿರುದ್ಧ ನಿರೀಕ್ಷೆಗೂ ಮೀರಿದ ಬೌಲಿಂಗ್ ಪ್ರದರ್ಶನ ನೀಡಿದ ಅಫ್ಘಾನ್ ಬೌಲರ್ಗಳು ಪವರ್ ಪ್ಲೇನಲ್ಲಿಯೇ ಆಫ್ರಿಕಾ ತಂಡದ ಪ್ರಮುಖ 7 ವಿಕೆಟ್ ಕಬಳಿಸಿದರೆ, ಇದಕ್ಕಾಗಿ ವ್ಯಯಿಸಿದ್ದು ಮಾತ್ರ ಕೇವಲ 36 ರನ್. ಅಫ್ಘಾನ್ ಪರ ಬೌಲರ್ಗಳಾದ ಫಜಲ್ಹಕ್ ಫಾರೂಕಿ ಮತ್ತು ಅಲ್ಲಾ ಘಜನ್ಫರ್ ಮೊದಲ 10 ಓವರ್‌ಗಳಲ್ಲಿ ತಲಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
Updated on: Sep 18, 2024 | 10:08 PM

ಭಾರತದಲ್ಲಿ ನಡೆಯಬೇಕಿದ್ದ ಏಕೈಕ ಟೆಸ್ಟ್ ಸರಣಿ ಮಳೆಗಾಹುತಿಯಾದ ಬೇಸರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನಾಡಲು ಯುಇಗೆ ಹಾರಿದ್ದ ಅಫ್ಘಾನಿಸ್ತಾನ ತಂಡ ಮೊದಲ ಏಕದಿನ ಪಂದ್ಯದಲ್ಲೇ ಮೇಲುಗೈ ಸಾಧಿಸಿದೆ. ಉಭಯ ತಂಡಗಳ ನಡುವೆ ಶಾರ್ಜಾದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನ್ ಬೌಲರ್ಗಳ ಆರ್ಭಟಕ್ಕೆ ಆಫ್ರಿಕಾ ತಂಡ ತತ್ತರಿಸಿ ಹೋಗಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 33.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 106 ರನ್ ಕಲೆಹಾಕಿದೆ. ತಂಡದ ಪರ ವಿಯಾನ್ ಮುಲ್ಡರ್ 52 ರನ್ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ, ಉಳಿದವರಿಂದ ಸಪ್ಪೆ ಪ್ರದರ್ಶನ ಕಂಡುಬಂತು.

ಅಫ್ಘಾನ್ ಬೌಲರ್ಗಳ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡದ ನಾಲ್ವರು ಬ್ಯಾಟ್ಸ್ಮನ್ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ಮೂವರು ಆಟಗಾರರು ಒಂದಂಕಿಗೆ ಸುಸ್ತಾದರೆ, ಮೂವರು ಆಟಗಾರರು ಮಾತ್ರ ಎರಡಂಕಿ ಮೊತ್ತ ತಲುಪಿದರು.

ಇತ್ತ ದಕ್ಷಿಣ ಆಫ್ರಿಕಾ ವಿರುದ್ಧ ನಿರೀಕ್ಷೆಗೂ ಮೀರಿದ ಬೌಲಿಂಗ್ ಪ್ರದರ್ಶನ ನೀಡಿದ ಅಫ್ಘಾನ್ ಬೌಲರ್ಗಳು ಪವರ್ ಪ್ಲೇನಲ್ಲಿಯೇ ಆಫ್ರಿಕಾ ತಂಡದ ಪ್ರಮುಖ 7 ವಿಕೆಟ್ ಕಬಳಿಸಿದರೆ, ಇದಕ್ಕಾಗಿ ವ್ಯಯಿಸಿದ್ದು ಮಾತ್ರ ಕೇವಲ 36 ರನ್. ಅಫ್ಘಾನ್ ಪರ ಬೌಲರ್ಗಳಾದ ಫಜಲ್ಹಕ್ ಫಾರೂಕಿ ಮತ್ತು ಅಲ್ಲಾ ಘಜನ್ಫರ್ ಮೊದಲ 10 ಓವರ್‌ಗಳಲ್ಲಿ ತಲಾ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಅಂತಿಮವಾಗಿ ಫಜಲ್ಹಕ್ ಫಾರೂಕಿ ತಂಡದ ಪರ ಗರಿಷ್ಠ ನಾಲ್ಕು ವಿಕೆಟ್ ಪಡೆದರು. ಇದರಲ್ಲಿ ಅವರು ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜಾರ್ಜಿ, ಕ್ಯಾಪ್ಟನ್ ಮಾರ್ಕ್ರಾಮ್ ಮತ್ತು ವಿಯಾನ್ ಮುಲ್ಲರ್ ಅವರ ವಿಕೆಟ್ಗಳನ್ನು ಪಡೆದರು. ಈ 4 ವಿಕೆಟ್ಗಳೊಂದಿಗೆ ಅವರು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ 100 ವಿಕೆಟ್‌ಗಳನ್ನು ಪೂರೈಸಿದರು.

ಹಾಗೆಯೇ ಫಾರೂಕಿಗೆ ಉತ್ತಮ ಸಾಥ್ ನೀಡಿದ ಅಫ್ಘಾನಿಸ್ತಾನದ 18ರ ಹರೆಯದ ಸ್ಪಿನ್ನರ್ ಅಲ್ಲಾ ಘಜನ್‌ಫರ್ ತಮ್ಮ ಖೋಟಾದ 10 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ ಮೂರು ವಿಕೆಟ್ ಪಡೆದರು. ಇದರಲ್ಲಿ ಎರಡು ಮೇಡನ್ ಓವರ್ ಕೂಡ ಸೇರಿತ್ತು. ಅವರ ಪ್ರದರ್ಶನದ ಆಧಾರದ ಮೇಲೆ ಪ್ರೋಟೀಸ್ ತಂಡ ಕೇವಲ 106 ರನ್‌ಗಳಿಗೆ ಆಲೌಟ್ ಆಯಿತು.

ಇನ್ನು ದಕ್ಷಿಣ ಆಫ್ರಿಕಾ ನೀಡಿರುವ 106 ರನ್ಗಳ ಗುರಿ ಬೆನ್ನಟ್ಟಿರುವ ಅಫ್ಘಾನಿಸ್ತಾನ ತಂಡ ಈ ಸುದ್ದಿ ಬರೆಯುವ ಹೊತ್ತಿಗೆ 3 ವಿಕೆಟ್ ಕಳೆದುಕೊಂಡು 46 ರನ್ ಕಲೆಹಾಕಿದೆ. ಅಫ್ಘಾನಿಸ್ತಾನ ತಂಡದ ಗೆಲುವಿಗೆ ಇದೀಗ 35 ಓವರ್‌ಗಳಲ್ಲಿ 61 ರನ್ಗಳ ಅಗತ್ಯವಿದೆ.




