- Kannada News Photo gallery Cricket photos South Africa Creates History: De Kock's Record Century Powers Historic T20 Chase vs WI
SA vs WI: ಬೃಹತ್ ಮೊತ್ತ ಬೆನ್ನಟ್ಟಿ ವಿಶ್ವ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ
South Africa Creates History: ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಎರಡನೇ ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ತಮ್ಮ ವೃತ್ತಿಜೀವನದ ಅತಿ ವೇಗದ ಶತಕ ಬಾರಿಸಿ ದಾಖಲೆ ನಿರ್ಮಿಸಿದರು. ರಯಾನ್ ರಿಕಲ್ಟನ್ ಅವರ ಅಮೂಲ್ಯ ಪಾಲುದಾರಿಕೆಯೊಂದಿಗೆ, ದ.ಆಫ್ರಿಕಾ ತಂಡವು T20I ಇತಿಹಾಸದಲ್ಲಿ 220+ ರನ್‌ಗಳನ್ನು ಬೆನ್ನಟ್ಟಿದ ಮೊದಲ ತಂಡವಾಗಿ ಹೊಸ ರನ್ ಚೇಸ್ ದಾಖಲೆ ಬರೆಯಿತು.
Updated on: Jan 30, 2026 | 5:42 PM

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಟಿ20 ಸರಣಿಯನ್ನು ಆಫ್ರಿಕಾ ತಂಡವು 2-0 ಮುನ್ನಡೆಯೊಂದಿಗೆ ವಶಪಡಿಸಿಕೊಂಡಿದೆ. ಉಭಯ ತಂಡಗಳ ನಡುವೆ ನಡೆದ ಎರಡನೇ ಟಿ20 ಪಂದ್ಯವನ್ನು ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮಾತ್ರವಲ್ಲದೆ ರನ್ ಚೇಸ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿತು. ಆಫ್ರಿಕಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕ್ವಿಂಟನ್ ಡಿ ಕಾಕ್ ತಮ್ಮ ಟಿ20 ವೃತ್ತಿಜೀವನದ ವೇಗದ ಶತಕ ಬಾರಿಸಿದರೆ, ರಯಾನ್ ರಿಕಲ್ಟನ್ ಕೂಡ ತಮ್ಮ ವೃತ್ತಿಜೀವನದ ಅತಿದೊಡ್ಡ ಇನ್ನಿಂಗ್ಸ್ ಆಡಿದರು.

ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 221 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ಮಾರ್ಕ್ರಾಮ್ ಔಟಾದ ನಂತರ ಬಂದ ರಿಕಲ್ಟನ್, ಡಿ ಕಾಕ್‌ಗೆ ಉತ್ತಮ ಬೆಂಬಲ ನೀಡಿದರು.

ಕ್ವಿಂಟನ್ ಡಿ ಕಾಕ್ 49 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಒಳಗೊಂಡಂತೆ 115 ರನ್ ಗಳಿಸಿದರು. 234.69 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಡಿ ಕಾಕ್ 43 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಶತಕ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ ಡಿ ಕಾಕ್, ರಿಕಲ್ಟನ್ ಅವರೊಂದಿಗೆ ಎರಡನೇ ವಿಕೆಟ್‌ಗೆ 152 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಒಂದಡೆ ಡಿ ಕಾಕ್ ದಾಖಲೆಯ ಶತಕ ಬಾರಿಸಿದರೆ, ಇತ್ತ ರಯಾನ್ ತಮ್ಮ ವೃತ್ತಿಜೀವನದ ಅತಿ ದೊಡ್ಡ ಇನ್ನಿಂಗ್ಸ್ ಆಡಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಯಾನ್ 36 ಎಸೆತಗಳಲ್ಲಿ 213.88 ಸ್ಟ್ರೈಕ್ ರೇಟ್‌ನಲ್ಲಿ ಒಂಬತ್ತು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಸೇರಿದಂತೆ 77 ರನ್ ಬಾರಿಸಿದರು.

ಡಿ ಕಾಕ್ ಮತ್ತು ರಿಕಲ್ಟನ್ ಅವರ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 220 ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟಿದ ಮೊದಲ ಐಸಿಸಿ ಸದಸ್ಯ ರಾಷ್ಟ್ರ ಎನಿಸಿಕೊಂಡಿತು. ಸೆಂಚೂರಿಯನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ತಂಡವು 17.3 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ಗಳಿಗೆ 222 ರನ್‌ಗಳ ಗುರಿ ತಲುಪಿತು.

ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ, ಎರಡನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಮೂರನೇ ಟಿ20 ಪಂದ್ಯ ಜನವರಿ 31 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.
