
ದಕ್ಷಿಣ ಆಫ್ರಿಕಾದ ಚೊಚ್ಚಲ ಟಿ20 ಲೀಗ್ SA20 ಅಂತಿಮ ಹಂತ ತಲುಪಿದ್ದು, ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯವು ಗುರುವಾರ, ಫೆಬ್ರವರಿ 7 ರಂದು ನಡೆಯಿತು. ಸನ್ ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಜೋಬರ್ಗ್ ಸೂಪರ್ ಕಿಂಗ್ಸ್ ನಡುವಿನ ಈ ಪಂದ್ಯದಲ್ಲಿ ಸನ್ ರೈಸರ್ಸ್ ನಾಯಕ ಏಡನ್ ಮಾರ್ಕ್ರಾಮ್ ಸ್ಫೋಟಕ ಶತಕ ಬಾರಿಸಿದಲ್ಲದೆ ತಂಡವನ್ನು ಫೈನಲ್ಗೆ ಕರೆದೊಯ್ದಿದ್ದಾರೆ.

ಸೆಂಚುರಿಯನ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಕೇವಲ 10 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಪರಿಸ್ಥಿತಿಯಲ್ಲಿ ತಂಡದ ಜವಬ್ದಾರಿವಹಿಸಿಕೊಂಡ ನಾಯಕ ಮಾರ್ಕ್ರಾಮ್ ಅಬ್ಬರದ ಇನ್ನಿಂಗ್ಸ್ ಕಟ್ಟಿದರು.

ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಮಾರ್ಕ್ರಾಮ್ ನಂತರ ಜೋಬರ್ಗ್ ಬೌಲರ್‌ಗಳನ್ನು ಬೆಂಡೆತ್ತಲು ಆರಂಭಿಸಿದರು. ಈ ಪೈಕಿ ರೊಮಾರಿಯೊ ಶೆಫರ್ಡ್ ಎಸೆದ 18ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸೇರಿದಂತೆ 21 ರನ್ ಕಲೆ ಹಾಕಿದರು.

ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮಾರ್ಕ್ರಾಮ್ ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಟಿ20 ಶತಕ ಮತ್ತು ಮೂರನೇ ಶತಕವನ್ನು ಬಾರಿಸಿದರು. ಮಾರ್ಕ್ರಾಮ್ ಕೇವಲ 57 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಶತಕ ಪೂರೈಸಿದರು. ನಂತರದ ಎಸೆತದಲ್ಲಿ ಬೌಂಡರಿಯಲ್ಲಿ ಕ್ಯಾಚ್ ನೀಡಿದರಾದರೂ ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ ಸನ್‌ರೈಸರ್ಸ್ ತಂಡ 213 ರನ್‌ಗಳ ಪ್ರಬಲ ಸ್ಕೋರ್ ಗಳಿಸಿತು.

ಅಂತಿಮವಾಗಿ ಈ ಗುರಿ ಬೆನ್ನಟ್ಟಿದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ರೀಜಾ ಹೆಂಡ್ರಿಕ್ಸ್ ಅಬ್ಬರದ 96 ರನ್ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.