Shafali Verma: ದಾಖಲೆಗಳ ಮೇಲೆ ದಾಖಲೆ ಬರೆದ ಶಫಾಲಿ ವರ್ಮಾ
Shafali Verma Records: ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ಡಬಲ್ ಸೆಂಚುರಿ ಸಿಡಿಸಿ ಶಫಾಲಿ ವರ್ಮಾ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಭಾರತದ ಪರ ಟೆಸ್ಟ್ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಶಫಾಲಿ ವರ್ಮಾ ಈ ಎಲ್ಲಾ ಸಾಧನೆ ಮಾಡಿರುವುದು ಕೇವಲ 20ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
1 / 8
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸಿ ಟೀಮ್ ಇಂಡಿಯಾ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕಳಾಗಿ ಕಣಕ್ಕಿಳಿದ ಶಫಾಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದರು. ಪರಿಣಾಮ ಕೇವಲ 113 ಎಸೆತಗಳಲ್ಲಿ ಶತಕ ಪೂರೈಸಿದರು.
2 / 8
ಇನ್ನು ಶತಕದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ 20ರ ಹರೆಯದ ಭಾರತೀಯ ಓಪನರ್ 196 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ದ್ವಿಶತಕದ ಬೆನ್ನಲ್ಲೇ 197 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 23 ಫೋರ್ಗಳೊಂದಿಗೆ 205 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ 205 ರನ್ಗಳೊಂದಿಗೆ ಶಫಾಲಿ ವರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
3 / 8
ಸ್ಪೋಟಕ ಸೆಂಚುರಿ: ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಶಫಾಲಿ ವರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಜಾನೆಟ್ ಬ್ರಿಟಿನ್ ಹೆಸರಿನಲ್ಲಿತ್ತು. 1984 ರಲ್ಲಿ ಇಂಗ್ಲೆಂಡ್ ಆಟಗಾರ್ತಿ ಜಾನೆಟ್ ಬ್ರಿಟಿನ್ 137 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಕೇವಲ 113 ಎಸೆತಗಳಲ್ಲಿ ಸೆಂಚುರಿ ಪೂರೈಸಿರುವ ಶಫಾಲಿ ಮಹಿಳಾ ಟೆಸ್ಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
4 / 8
ವೇಗದ ದ್ವಿಶತ: 113 ಎಸೆತಗಳಲ್ಲಿ ಶತಕ ಬಾರಿಸಿದ್ದ ಶಫಾಲಿ ವರ್ಮಾ ದ್ವಿಶತಕ 197 ಬಾಲ್ಗಳಲ್ಲಿ ಡಬಲ್ ಸೆಂಚುರಿ ಪೂರೈಸಿದ್ದರು. ಇದರೊಂದಿಗೆ ಮಹಿಳಾ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗದ ದ್ವಿಶತಕ ಸಿಡಿಸಿದ ದಾಖಲೆ ಕೂಡ ಟೀಮ್ ಇಂಡಿಯಾ ಆಟಗಾರ್ತಿಯ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ (248 ಎಸೆತಗಳು) ಹೆಸರಿನಲ್ಲಿತ್ತು.
5 / 8
ಎರಡನೇ ಭಾರತೀಯ ಆಟಗಾರ್ತಿ: ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ದ್ವಿಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಶಫಾಲಿ ವರ್ಮಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2002 ರಲ್ಲಿ ಮಿಥಾಲಿ ರಾಜ್ (214) ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿದ್ದರು. ಇದೀಗ 205 ರನ್ಗಳೊಂದಿಗೆ ಶಫಾಲಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
6 / 8
ಸಿಕ್ಸರ್ ಕ್ವೀನ್: ಮಹಿಳಾ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ವಿಶ್ವ ದಾಖಲೆ ಕೂಡ ಶಫಾಲಿ ವರ್ಮಾ ಪಾಲಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಶಫಾಲಿ 8 ಸಿಕ್ಸ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ 2 ಸಿಕ್ಸ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
7 / 8
ಆರಂಭಿಕ ದಾಖಲೆ: ಮಹಿಳಾ ಟೆಸ್ಟ್ ಪಂದ್ಯದಲ್ಲಿ ಮೊದಲ ವಿಕೆಟ್ಗೆ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಕೂಡ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ಪಾಲಾಗಿದೆ. ಟೀಮ್ ಇಂಡಿಯಾದ ಆರಂಭಿಕ ಜೋಡಿ 292 ರನ್ಗಳನ ಜೊತೆಯಾಟದೊಂದಿಗೆ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನ್ ತಂಡದ ಆರಂಭಿಕ ಜೋಡಿ ಕಿರಣ್ ಬಲೂಚ್ ಮತ್ತು ಸಜ್ಜಿದಾ ಶಾ 241 ರನ್ಗಳ ಜೊತೆಯಾಟವಾಡಿದ್ದು ಇದುವರೆಗಿನ ದಾಖಲೆಯಾಗಿತ್ತು.
8 / 8
ಅತ್ಯುತ್ತಮ ಜೊತೆಯಾಟ: ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳ ಜೊತೆಯಾಟವಾಡಿದ ದಾಖಲೆಯನ್ನು ಶಫಾಲಿ-ಸ್ಮೃತಿ ಜೋಡಿ ತಮ್ಮದಾಗಿಸಿಕೊಂಡಿಸಿದ್ದಾರೆ. ಈ ಹಿಂದೆ ತಿರುಶ್ ಕಾಮಿನಿ ಮತ್ತು ಪುನಮ್ ರಾವುತ್ 275 ರನ್ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದರು. ಇದೀಗ 292 ರನ್ಗಳ ಜೊತೆಯಾಟದೊಂದಿಗೆ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ.