ಟೀಮ್ ಇಂಡಿಯಾ ಸ್ಟಾರ್ ಓಪನರ್ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ನಡುವೆ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಧವನ್ ಮತ್ತು ಆಯೆಷಾ ಅವರು 2021ರ ಸೆಪ‍್ಟೆಂಬರ್‌ನಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ವಿಚಾರವನ್ನು ಆಯೇಷಾ ಅವರೇ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಅದರೊಂದಿಗೆ ಅವರ 8 ವರ್ಷಗಳ ದಾಂಪತ್ಯ ಅಂತ್ಯವಾಗಿತ್ತು.
ಬಳಿಕ ಆಯೇಷಾ ತನ್ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಧವನ್ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೆ ಧವನ್ ವಿರುದ್ಧ ಅವಹೇಳನಕಾರಿ ಹಾಗೂ ಆಧಾರ ರಹಿತ ಆರೋಪ ಮಾಡುವಂತಿಲ್ಲ ಎಂದು ಆಯೇಷಾಗೆ ಕೋರ್ಟ್ ಆದೇಶಿಸಿದೆ. ಹಾಗಾದರೆ ಧವನ್ ವಿಚ್ಛೇದಿತ ಪತ್ನಿ ಆಯೆಷಾ ಮುಖರ್ಜಿ ಯಾರು?.
ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಪರಿಚಿತರಾಗಿದ್ದರು. ಟೀಮ್ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಧವನ್ ದಂಪತಿಯ ಸಾಮಾನ್ಯ ಸ್ನೇಹಿತರಾಗಿದ್ದಾರೆ.
ಆಯೇಷಾ ಮುಖರ್ಜಿ ಮೂಲತಃ ಆಂಗ್ಲೋ-ಇಂಡಿಯನ್. ಇವರ ತಂದೆ ಭಾರತೀಯರಾದರೆ ತಾಯಿ ಬ್ರಿಟಿಷ್ ಮೂಲದವರಾಗಿದ್ದಾರೆ. ಆಯೇಷಾ ಮೆಲ್ಬೋರ್ನ್ ಕಿಕ್ ಬಾಕ್ಸರ್ ಕೂಡ ಆಗಿದ್ದಾರೆ. ಅವರು ಯಶಸ್ವಿ ಕಿಕ್ ಬಾಕ್ಸರ್ ಆಗಿದ್ದು, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಖ್ಯಾತಿ ಹೊಂದಿದ್ದಾರೆ.
ಆಯೇಷಾ ಅವರ ಜನನದ ನಂತರ ಅವರ ಕುಟುಂಬ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿತ್ತು. ಆಯೇಷಾ ಪ್ರಸ್ತುತ ಅವರು ಮೆಲ್ಬೋರ್ನ್‌ನಲ್ಲಿ ನೆಲೆಸಿದ್ದಾರೆ.
ಆಯೆಶಾ ಅವರಿಗೆ ಧವನ್ ಜೊತೆ ಎರಡನೇ ವಿವಾಹ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೂಲದ ವ್ಯಾಪಾರಿ ಒಬ್ಬರನ್ನು ಮದುವೆಯಾಗಿದ್ದರು. ಅವರೊಟ್ಟಿಗೆ ಇಬ್ಬರು ಹೆಣ್ಣು ಮಕ್ಕಳನ್ನೂ ಪಡೆದಿದ್ದರು. ಬಳಿಕ ಇಬ್ಬರನ್ನೂ ತಮ್ಮದೇ ಮಕ್ಕಳನ್ನಾಗಿ ಶಿಖರ್ ಧವನ್ ಸ್ವೀಕರಿಸಿದ್ದರು. ಇದಾದ ನಂತರ ಧವನ್ ಮತ್ತು ಆಯೆಶಾ ದಂಪತಿಗೆ ಗಂಡು ಮಗು ಜನಿಸಿ, ಮಗನಿಗೆ ಜೊರಾವರ್ ಎಂದು ಹೆಸರಿಟ್ಟಿದ್ದರು.
ಧವನ್-ಆಯೇಷಾ ವಿಚ್ಛೇದನಕ್ಕೆ ನಿಖರ ಕಾರಣ ಇನ್ನೂ ಬಹಿರಂಗಗೊಂಡಿಲ್ಲ. ಆದರೆ, ಆಯೇಷಾ ಅವರು ಈ ಕುರಿತು ಪ್ರಕಟಿಸುವಾಗ, ಇತ್ತೀಚಿನ ಬೆಳವಣಿಗೆಗಳಿಂದ ಮನನೊಂದು ಅವರು ಈ ನಿರ್ಧಾರ ತೆಗೆದುಕೊಂಡಿರುವುದು ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಆಘಾತದಲ್ಲಿ ಇರುವುದಾಗಿಯೂ ಆಯೇಷಾ ಹೇಳಿಕೊಂಡಿದ್ದರು.
Published On - 11:27 am, Mon, 6 February 23