
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ಸರಣಿಯು ನವೆಂಬರ್ 14 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಾಗುತ್ತಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವೆ ಮೂರು ಮ್ಯಾಚ್ಗಳ ಏಕದಿನ ಸರಣಿ ಜರುಗಲಿದೆ.

ಏಕದಿನ ಸರಣಿಯು ನವೆಂಬರ್ 30 ರಿಂದ ಶುರುವಾಗಲಿದ್ದು, ಈ ಸರಣಿಗೆ ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಅಯ್ಯರ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿದ್ದ ಅಯ್ಯರ್ ಇದೀಗ ಚೇತರಿಕೆಯ ಹಂತದಲ್ಲಿದ್ದಾರೆ.

ಅಲ್ಲದೆ ಇನ್ನೊಂದಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಮೂರು ಮ್ಯಾಚ್ಗಳ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದರೆ ಅವರು ಐಪಿಎಲ್ ಮೂಲಕ ಕಂಬ್ಯಾಕ್ ಮಾಡಬಹುದು.

ಏಕೆಂದರೆ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿಲ್ಲ. ಹೀಗಾಗಿ ಮಾರ್ಚ್ ದ್ವಿತೀಯ ವಾರದಿಂದ ಆರಂಭವಾಗಲಿರುವ ಐಪಿಎಲ್ ಸೀಸನ್-19ರ ಮೂಲಕ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡುವ ನಿರೀಕ್ಷೆಯಿದೆ.

ಪ್ರಸ್ತುತ ಭಾರತ ಏಕದಿನ ತಂಡ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್, ಶ್ರೇಯಸ್ ಅಯ್ಯರ್ (ಗಾಯಾಳು).