ಮುಂಬರುವ ಏಷ್ಯಾಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಬಲಿಷ್ಠ 17 ಆಟಗಾರರಿಗೆ ಅವಕಾಶ ನೀಡಲಾಗಿದೆ. ಈ ಪಂದ್ಯಾವಳಿಯೊಂದಿಗೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳುತ್ತಿದ್ದಾರೆ.
ಈ ಇಬ್ಬರ ಆಗಮನದಿಂದ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಿದೆ. ಆದರೆ ತಂಡ ಪ್ರಕಟವಾದಾಗ, ಈ ಇಬ್ಬರ ಆಯ್ಕೆಯ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದರು. ಬಹಳ ದಿನಗಳಿಂದ ಮೈದಾನದಿಂದ ದೂರವಿರುವ ಈ ಇಬ್ಬರನ್ನು ಪ್ರಮುಖ ಈವೆಂಟ್ಗೆ ತಂಡದಲ್ಲಿ ಆಯ್ಕೆ ಮಾಡಿದ್ದು ಸರಿಯಿಲ್ಲ ಎಂದು ದೂರಿದ್ದರು.
ಆದರೀಗ ಈ ಇಬ್ಬರನ್ನು ತಂಡದಲ್ಲಿ ಏಕೆ ಆಯ್ಕೆ ಮಾಡಲಾಯಿತು ಎಂಬ ಮಾಹಿತಿ ಹೊರಬಿದ್ದಿದೆ. ವಾಸ್ತವವಾಗಿ ಬೆಂಗಳೂರಿನ ಎನ್ಸಿಎನಲ್ಲಿ ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡಿದ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್, ತಮ್ಮ ಫಿಟ್ನೆಸ್ ಸಾಬೀತುಪಡಿಸಿ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಈ ಇಬ್ಬರ ಆಯ್ಕೆಯನ್ನು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಸಮರ್ಥಿಸಿಕೊಂಡಿದ್ದಾರೆ.
ಇದೀಗ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 199 ರನ್ ಬಾರಿಸಿದರು. ಅಲ್ಲದೆ ಮತ್ತೊಂದು ಅಭ್ಯಾಸ ಪಂದ್ಯದಲ್ಲಿ ಅವರು ಸಂಪೂರ್ಣ 50 ಓವರ್‌ವರೆಗೆ ಮೈದಾನದಲ್ಲಿ ಫೀಲ್ಡಿಂಗ್ ಮಾಡಿದರು. ಈ ಮೂಲಕ ಅವರು ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರು ಎಂದು ವರದಿಯಾಗಿದೆ.
ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿರುವ ಟೈಮ್ಸ್ ಆಫ್ ಇಂಡಿಯಾ, ‘ಶ್ರೇಯಸ್ ಅಯ್ಯರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ 199 ರನ್ ಬಾರಿಸಿದರು. ಅಲ್ಲದೆ ತಮ್ಮ ಫಿಟ್‌ನೆಸ್ ಸಾಭೀತುಪಡಿಸಲು ಮೈದಾನದಲ್ಲಿ 50 ಓವರ್‌ಗಳವರೆಗೆ ಫೀಲ್ಡಿಂಗ್ ಮಾಡಿದರು. ಹೀಗಾಗಿ ಅವರನ್ನು ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಏಷ್ಯಾಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಬ್ಯಾಕ್ಅಪ್).