Updated on: Dec 06, 2022 | 3:54 PM
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಸೋಲಿಗೆ ಒಂದು ಕಾರಣ ಆರಂಭಿಕರ ವೈಫಲ್ಯ. ಓಪನರ್ಗಳಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಇದೀಗ ಟೀಮ್ ಇಂಡಿಯಾ ಮುಂದೆ ಏಕದಿನ ವಿಶ್ವಕಪ್ ಇದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಈ ವಿಶ್ವಕಪ್ನಲ್ಲಿ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕೆಂದರೆ ಬಾಂಗ್ಲಾದೇಶ್ ಹಾಗೂ ನ್ಯೂಜಿಲೆಂಡ್ ಸರಣಿಗಳಲ್ಲಿ ಶಿಖರ್ ಧವನ್ ಆರಂಭಿಕರಾಗಿ ಆಡಿದ್ದರು. ಇದಾಗ್ಯೂ ಧವನ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಮತ್ತೊಂದೆಡೆ ಬಾಂಗ್ಲಾ ವಿರುದ್ಧ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ 73 ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಕೆಎಲ್ಆರ್ ಮಧ್ಯಮ ಕ್ರಮಾಂಕದಲ್ಲೇ ಬ್ಯಾಟ್ ಬೀಸುವ ಸಾಧ್ಯತೆ ಹೆಚ್ಚಿದೆ.
ಇತ್ತ ಶಿಖರ್ ಧವನ್-ರೋಹಿತ್ ಶರ್ಮಾ ಜೋಡಿ ಆರಂಭಿಕರಾಗಿ ವಿಫಲರಾದರೆ ಟೀಮ್ ಇಂಡಿಯಾಗೆ ಪರ್ಯಾಯ ಓಪನರ್ ಯಾರಿದ್ದಾರೆ ಎಂಬ ಪ್ರಶ್ನೆಯನ್ನು ಮಾಜಿ ಆಟಗಾರ ಯುವರಾಜ್ ಸಿಂಗ್ ಮುಂದಿಡಲಾಗಿದೆ. ಈ ಪ್ರಶ್ನೆಗೆ ಯುವಿ ಕಡೆಯಿಂದ ಬಂದ ಏಕೈಕ ಉತ್ತರ ಶುಭ್ಮನ್ ಗಿಲ್.
ಶುಭ್ಮನ್ ಗಿಲ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗೆಯೇ ಅವರು ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಹೀಗಾಗಿ 2023 ರ ಏಕದಿನ ವಿಶ್ವಕಪ್ನಲ್ಲಿ ಆರಂಭಿಕರಾಗಿ ಶುಭ್ಮನ್ ಗಿಲ್ ಅವಕಾಶ ಪಡೆಯುವ ವಿಶ್ವಾಸವಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಶುಭ್ಮನ್ ಗಿಲ್ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಗಳಿರುವ ಯುವರಾಜ್ ಸಿಂಗ್, ನಿಜವಾಗಿಯೂ ಆತ ತುಂಬಾ ಶ್ರಮಜೀವಿ. ಮುಂದಿನ 10 ವರ್ಷಗಳಲ್ಲಿ ಅವರು ವಿಶೇಷ ಸಾಧನೆ ಮಾಡುತ್ತಾರೆ ಎಂದು ನಾನು ನಂಬುತ್ತೇನೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ 2023 ರ ಏಕದಿನ ವಿಶ್ವಕಪ್ನಲ್ಲಿ ಆರಂಭಿಕರಾಗಿ ಶುಭ್ಮನ್ ಪ್ರಬಲ ಸ್ಪರ್ಧಿ ಎಂದು ಯುವಿ ಹೇಳಿದ್ದಾರೆ.
ಕೋವಿಡ್-19 ಲಾಕ್ಡೌನ್ ಸಮಯದಲ್ಲಿ, ಶುಭಮನ್ ಗಿಲ್ ಹಾಗೂ ಪಂಜಾಬ್ ರಣಜಿ ತಂಡ ನಾಯಕ ಅಭಿಷೇಕ್ ಶರ್ಮಾ ಮತ್ತು ಪಂಜಾಬ್ನ ಇತರ ಜೂನಿಯರ್ ಆಟಗಾರರು ಯುವರಾಜ್ ಸಿಂಗ್ ಅವರಿಂದ ತರಬೇತಿ ಪಡೆದಿದ್ದರು. ಇದೇ ವೇಳೆ ಯುವಿ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಹತ್ತಿರದಿಂದ ನೋಡಿದ್ದರು. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಗಿಲ್ ವಿಶೇಷ ಸಾಧನೆ ಮಾಡಲಿದ್ದಾರೆ ಎಂದು ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಇನ್ನು ಶುಭಮನ್ ಗಿಲ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, 2022 ರಲ್ಲಿ 12 ಏಕದಿನ ಪಂದ್ಯಗಳನ್ನು ಆಡಿರುವ ಯುವ ಬ್ಯಾಟ್ಸ್ಮನ್ ಒಟ್ಟು 638 ರನ್ ಗಳಿಸಿದ್ದಾರೆ. ಈ ವೇಳೆ ಗಿಲ್ 4 ಅರ್ಧ ಶತಕ ಹಾಗೂ 1 ಶತಕ ಬಾರಿಸಿದ್ದಾರೆ. ಅಂದರೆ ಅವರ ಸರಾಸರಿ ಕೂಡ 70ಕ್ಕಿಂತ ಹೆಚ್ಚಿದೆ. ಇದಾಗ್ಯೂ ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿಯಿಂದ ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟಿರುವುದೇ ಅಚ್ಚರಿ.