Updated on: Jan 22, 2023 | 10:06 PM
ಶುಭ್ಮನ್ ಗಿಲ್....ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ. ಈಗಾಗಲೇ ಏಕದಿನ ಕ್ರಿಕೆಟ್ನಲ್ಲಿ ರನ್ ಮೇಲೆ ರನ್ಗಳಿಸುತ್ತಾ ಮುನ್ನುಗ್ಗಿತ್ತಿದ್ದಾರೆ. ವಿಶೇಷ ಎಂದರೆ ಈ ಮುನ್ನುಗ್ಗುವಿಕೆಯ ನಡುವೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯಂತಹ ಶ್ರೇಷ್ಠ ಆಟಗಾರರನ್ನು ಹಿಂದಿಕಿದ್ದಾರೆ. ಹೀಗಾಗಿಯೇ ಶುಭ್ಮನ್ ಗಿಲ್ ಟೀಮ್ ಇಂಡಿಯಾ ಪರ ಶುಭಾರಂಭ ಮಾಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಸಾಕ್ಷಿಯೇ ಪ್ರಸ್ತುತ ಅಂಕಿ ಅಂಶಗಳು.
ಹೌದು, ಶುಭ್ಮನ್ ಗಿಲ್ ಟೀಮ್ ಇಂಡಿಯಾ ಪರ ಕೇವಲ 20 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ 20 ಇನಿಂಗ್ಸ್ನಲ್ಲಿ 1 ದ್ವಿಶತಕ, 3 ಶತಕ ಹಾಗೂ 5 ಅರ್ಧಶತಕಗಳು ಮೂಡಿಬಂದಿವೆ. ಅಂದರೆ ಗಿಲ್ 71.38 ಸರಾಸರಿಯಲ್ಲಿ ರನ್ಗಳಿಸಿದ್ದಾರೆ.
ಹೀಗೆ ರನ್ ಪೇರಿಸುತ್ತಾ ಸಾಗುತ್ತಿರುವ ಶುಭ್ಮನ್ ಗಿಲ್ ಹಳೆಯ ದಾಖಲೆಗಳನ್ನು ಕೂಡ ಮುರಿಯುತ್ತಿರುವುದು ವಿಶೇಷ. ಅಂದರೆ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 500 ರನ್ ಕಲೆಹಾಕಿದ ದಾಖಲೆ ಇದೀಗ ಶುಭ್ಮನ್ ಹೆಸರಿನಲ್ಲಿದೆ.
ಈ ಹಿಂದೆ ಈ ದಾಖಲೆ ನವಜೋತ್ ಸಿಂಗ್ ಸಿಧು ಹೆಸರಿನಲ್ಲಿತ್ತು. ಸಿಧು ಮೊದಲ 11 ಇನಿಂಗ್ಸ್ನಲ್ಲಿ 500 ರನ್ ಕಲೆಹಾಕಿದ್ದರು. ಆದರೆ ಯುವ ದಾಂಡಿಗ ಗಿಲ್ ಕೇವಲ 10 ಇನಿಂಗ್ಸ್ನಲ್ಲಿ 500 ರನ್ ಪೇರಿಸುವ ಮೂಲಕ 1987 ರಲ್ಲಿ ಸಿಧು ಬರೆದಿಟ್ಟ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಇದೀಗ ಅತ್ಯಂತ ವೇಗವಾಗಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಹೆಸರಿನಲ್ಲಿತ್ತು.
ಧವನ್ ಹಾಗೂ ಕೊಹ್ಲಿ 24 ಏಕದಿನ ಇನಿಂಗ್ಸ್ ಮೂಲಕ ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಆದರೆ ಇದೀಗ ಕೇವಲ 19 ಇನಿಂಗ್ಸ್ ಮೂಲಕ ಶುಭ್ಮನ್ ಗಿಲ್ ಸಾವಿರ ರನ್ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿಗಿಂತ 5 ಇನಿಂಗ್ಸ್ ಕಡಿಮೆ ಅವಧಿಯಲ್ಲಿ ಗಿಲ್ ಈ ಸಾಧನೆ ಮಾಡಿದ್ದಾರೆ.
ಪ್ರಸ್ತುತ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 500 ಹಾಗೂ 1000 ರನ್ ಕಲೆಹಾಕಿದ ದಾಖಲೆ ಶುಭ್ಮನ್ ಗಿಲ್ ಹೆಸರಿನಲ್ಲಿದೆ. ಆರಂಭದಲ್ಲೇ 2 ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ಗಿಲ್ ಮುಂಬರುವ ದಿನಗಳಲ್ಲಿ ಮತ್ತಷ್ಟು ರೆಕಾರ್ಡ್ಗಳನ್ನು ನಿರ್ಮಿಸುವುದರಲ್ಲಿ ಅನುಮಾನವೇ ಇಲ್ಲ.
ಏಕೆಂದರೆ ಆಡಿರುವ 20 ಏಕದಿನ ಇನಿಂಗ್ಸ್ಗಳಲ್ಲಿ ನಾಲ್ಕು ಬಾರಿ ಅಜೇಯರಾಗಿ ಉಳಿದಿದ್ದಾರೆ. ಇನ್ನು 1 ದ್ವಿಶತಕ, 3 ಶತಕ ಹಾಗೂ 5 ಅರ್ಧಶತಕದೊಂದಿಗೆ ಒಟ್ಟು 1064 ರನ್ ಕಲೆಹಾಕಿದ್ದಾರೆ. ಹೀಗಾಗಿಯೇ ಶುಭ್ಮನ್ ಗಿಲ್ ಅವರನ್ನು ಭವಿಷ್ಯದ ಧ್ರುವತಾರೆ ಎಂದು ಬಣ್ಣಿಸಲಾಗುತ್ತಿದೆ.