
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಶುಭ್ಮನ್ ಗಿಲ್ ಹೊರಗುಳಿದಿದ್ದಾರೆ. ಬ್ಯಾಟಿಂಗ್ ವೇಳೆ ಗಿಲ್ ಅವರ ಬಲ ತೋರು ಬೆರಳಿಗೆ ಗಾಯವಾಗಿದ್ದು, ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಅವರು ಫೀಲ್ಡಿಂಗ್ಗೆ ಆಗಮಿಸಿರಲಿಲ್ಲ.

ಇತ್ತ ಶುಭ್ಮನ್ ಗಿಲ್ ಅಲಭ್ಯತೆಯ ನಡುವೆ 12ನೇ ಆಟಗಾರ ಸರ್ಫರಾಝ್ ಖಾನ್ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಸರ್ಫರಾಝ್ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (209) ಭರ್ಜರಿ ದ್ವಿಶತಕ ಬಾರಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 396 ರನ್ ಕಲೆಹಾಕಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿತು. 15.5 ಓವರ್ಗಳನ್ನು ಎಸೆದ ಬುಮ್ರಾ ಕೇವಲ 45 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಇಂಗ್ಲೆಂಡ್ ತಂಡವು 253 ರನ್ಗಳಿಗೆ ಆಲೌಟ್ ಆಯಿತು.

143 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಈ ಬಾರಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇದಾಗ್ಯೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ (104) ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಈ ಶತಕದ ನೆರವಿನಿಂದ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 255 ರನ್ಗಳಿಸಿ ಆಲೌಟ್ ಆಗಿದೆ.

ಮೊದಲ ಇನಿಂಗ್ಸ್ ಮುನ್ನಡೆ ಹಾಗೂ ದ್ವಿತೀಯ ಇನಿಂಗ್ಸ್ನ 255 ರನ್ಗಳೊಂದಿಗೆ ಇಂಗ್ಲೆಂಡ್ ತಂಡಕ್ಕೆ ಟೀಮ್ ಇಂಡಿಯಾ 399 ರನ್ಗಳ ಗುರಿ ನೀಡಿದೆ. ಈ ಬೃಹತ್ ಗುರಿಯನ್ನು ಬೆನ್ನತ್ತಿರುವ ಇಂಗ್ಲೆಂಡ್ 4ನೇ ದಿನದಾಟದ ಭೋಜನ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 194 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಬೆನ್ ಸ್ಟೋಕ್ಸ್ ಹಾಗೂ ಬೆನ್ ಫೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.