- Kannada News Photo gallery Cricket photos ICC ODI Rankings: Raza Topples Umarzai, Zimbabwe's All Rounder Dominance
ICC ODI Ranking: ದಿಗ್ಗಜರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಜಿಂಬಾಬ್ವೆಯ ಅನುಭವಿ ಆಲ್‌ರೌಂಡರ್
ICC ODI Rankings: ಐಸಿಸಿ ಬಿಡುಗಡೆ ಮಾಡಿದ ನೂತನ ಏಕದಿನ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಆಟಗಾರ ಸಿಕಂದರ್ ರಾಝಾ ಅಗ್ರಸ್ಥಾನಕ್ಕೇರಿದ್ದು, ಅಫ್ಘಾನಿಸ್ತಾನದ ಅಜ್ಮತುಲ್ಲಾ ಉಮರ್‌ಜೈ ಅವರನ್ನು ಹಿಂದಿಕ್ಕಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಜಿಂಬಾಬ್ವೆ ಸೋತರೂ, ರಾಝಾ ಅವರ ಅದ್ಭುತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ಗಮನ ಸೆಳೆದಿದೆ. ಟಾಪ್ 10 ರಲ್ಲಿ ಭಾರತದ ರವೀಂದ್ರ ಜಡೇಜಾ 9ನೇ ಸ್ಥಾನದಲ್ಲಿದ್ದಾರೆ.
Updated on: Sep 03, 2025 | 4:24 PM

ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ಆಲ್‌ರೌಂಡರ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜಿಂಬಾಬ್ವೆ ಆಟಗಾರರು ಸಂಪೂರ್ಣ ಪಾರುಪತ್ಯ ಸಾಧಿಸಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ಹಾಗೂ ಶ್ರೀಲಂಕಾ ನಡುವೆ ಎರಡು ಪಂದ್ಯಗಳ ಏಕದಿನ ಸರಣಿ ನಡೆಯಿತು. ಈ ಸರಣಿಯನ್ನು ಜಿಂಬಾಬ್ವೆ ತಂಡ 0-2 ಅಂತರದಿಂದ ಕಳೆದುಕೊಂಡರೂ ತಂಡದ ಆಲ್‌ರೌಂಡರ್ ಸಿಕಂದರ್ ರಾಝ ಪ್ರದರ್ಶನ ಗಮನಾರ್ಹವಾಗಿತ್ತು.

ಅದರಂತೆ ಐಸಿಸಿ ಬಿಡುಗಡೆ ಮಾಡಿರುವ ಆಲ್‌ರೌಂಡರ್‌ಗಳ ರ್ಯಾಂಕಿಂಗ್ನಲ್ಲಿ ಜಿಂಬಾಬ್ವೆಯ ಅನುಭವಿ ಆಟಗಾರ ಸಿಕಂದರ್ ರಾಝ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ ಒನ್ ಆಲ್‌ರೌಂಡರ್ ಎನಿಸಿಕೊಂಡಿದ್ದಾರೆ. ಅವರು ಅಫ್ಘಾನಿಸ್ತಾನದ ಅಜ್ಮತುಲ್ಲಾ ಉಮರ್‌ಜೈ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 92 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದ ರಾಝ, ಎರಡನೇ ಏಕದಿನ ಪಂದ್ಯದಲ್ಲಿ 55 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದ್ದರು. ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು.. ಆದಾಗ್ಯೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಜಿಂಬಾಬ್ವೆ 2-0 ಸೋಲನ್ನು ಎದುರಿಸಬೇಕಾಯಿತು.

ಸಿಕಂದರ್ ರಾಝ ಒಟ್ಟು 302 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರೆ, ಅಫ್ಘಾನಿಸ್ತಾನದ ಉಮರ್ಜೈ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದು, 296 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಮೊಹಮ್ಮದ್ ನಬಿ ಕೂಡ ಒಂದು ಸ್ಥಾನ ಕಳೆದುಕೊಂಡು 292 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.

ಉಳಿದಂತೆ ಬಾಂಗ್ಲಾದೇಶದ ಆಲ್‌ರೌಂಡರ್ ಮೆಹದಿ ಹಸನ್ ಮಿರ್ಜಾ ನಾಲ್ಕನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಭಾರತದಿಂದ ರವೀಂದ್ರ ಜಡೇಜಾ ಮಾತ್ರ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಜಡೇಜಾ 220 ರೇಟಿಂಗ್ ಪಾಯಿಂಟ್‌ಗಳೊಂದಿಗೆ 9 ನೇ ಸ್ಥಾನದಲ್ಲಿದ್ದಾರೆ. ಆಶ್ಚರ್ಯಕರವೆಂದರೆ, ಟಾಪ್ -10 ರಲ್ಲಿ ಪಾಕಿಸ್ತಾನದ ಯಾವ ಆಲ್ರೌಂಡರ್ಗೂ ಸ್ಥಾನ ಇಲ್ಲ.




