
ನವಿಮುಂಬೈನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಪಂದ್ಯದಲ್ಲಿ 45 ರನ್‌ಗಳ ಇನ್ನಿಂಗ್ಸ್ ಆಡಿದ ಸ್ಮೃತಿ ಮಂಧಾನ ಮಹಿಳಾ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೂಲಕ 2017 ರ ವಿಶ್ವಕಪ್‌ನಲ್ಲಿ 409 ರನ್ ಬಾರಿಸಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ ದಾಖಲೆಯನ್ನು ಸ್ಮೃತಿ ಮಂಧಾನ ಮುರಿದಿದ್ದಾರೆ. ಸ್ಮೃತಿ ಮಂಧಾನ ಈ ಟೂರ್ನಿಯಲ್ಲಿ ಇದುವರೆಗೆ 434 ರನ್ ಬಾರಿಸಿದ್ದಾರೆ.

ಸ್ಮೃತಿ ಮಂಧಾನ 2025 ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು ಒಂಬತ್ತು ಸಿಕ್ಸರ್‌ಗಳು ಮತ್ತು 50 ಬೌಂಡರಿಗಳನ್ನು ಬಾರಿಸಿದ್ದಾರೆ. 54.25 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಸ್ಮೃತಿ ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಆದಾಗ್ಯೂ ಈ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂಧಾನ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಫೈನಲ್‌ನಲ್ಲಿ 58 ಎಸೆತಗಳನ್ನು ಎದುರಿಸಿದ ಸ್ಮೃತಿ 8 ಬೌಂಡರಿಗಳ ಸಹಿತ 45 ರನ್ ಬಾರಿಸಿದರು. ಸ್ಮೃತಿ ಮಂಧಾನ ಫೈನಲ್‌ನಲ್ಲಿ ಶಫಾಲಿ ವರ್ಮಾ ಅವರೊಂದಿಗೆ 104 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ ಅಂತಿಮ ಪಂದ್ಯವು ಮಳೆಯಿಂದಾಗಿ ಎರಡು ಗಂಟೆಗಳ ವಿಳಂಬದೊಂದಿಗೆ ಪ್ರಾರಂಭವಾಯಿತು. ಎರಡೂ ತಂಡಗಳ ಆಡುವ 11 ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏತನ್ಮಧ್ಯೆ, ಶಫಾಲಿ ಮತ್ತು ಸ್ಮೃತಿ ಜೋಡಿ ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಬಲವಾದ ಆರಂಭವನ್ನು ಒದಗಿಸಿಕೊಟ್ಟರು.