Laura Wolvaardt: ಕೈ ಕೊಟ್ಟ ವಿಶ್ವಕಪ್ನಲ್ಲೂ ಕೈ ಹಿಡಿದ ವಿಶ್ವ ದಾಖಲೆ
India Women vs South Africa Women, Final: ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 52 ರನ್ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Updated on: Nov 03, 2025 | 9:53 AM

ಮಹಿಳಾ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಸೋಲನುಭವಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಸೋಲಿನ ನಡುವೆ ಸೌತ್ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 299 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಲಾರಾ ವೋಲ್ವಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭಿಕಳಾಗಿ ಕಣಕ್ಕಿಳಿದ ಲಾರಾ 98 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು.

ಈ 101 ರನ್ಗಳೊಂದಿಗೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಲಾರಾ ವೋಲ್ವಾರ್ಡ್ ಪಾಲಾಯಿತು. ಇದಕ್ಕೂ ಮುನ್ನ ಈ ಭರ್ಜರಿ ವರ್ಲ್ಡ್ ರೆಕಾರ್ಡ್ ಆಸ್ಟ್ರೇಲಿಯಾ ಆಟಗಾರ್ತಿ ಅಲಿಸ್ಸಾ ಹೀಲಿ ಹೆಸರಿನಲ್ಲಿತ್ತು.

2022ರಲ್ಲಿ ನ್ಯೂಝಿಲೆಂಡ್ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಅಲಿಸ್ಸಾ ಹೀಲಿ ಬರೋಬ್ಬರಿ 509 ರನ್ ಬಾರಿಸಿದ್ದರು. ಈ ಮೂಲಕ ಮಹಿಳಾ ವಿಶ್ವಕಪ್ ಆವೃತ್ತಿಯಲ್ಲಿ 500+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಬರೆದಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಲಾರಾ ವೋಲ್ವಾರ್ಡ್ ಯಶಸ್ವಿಯಾಗಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ 9 ಇನಿಂಗ್ಸ್ ಆಡಿರುವ ಲಾರಾ 2 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 571 ರನ್ ಕಲೆಹಾಕಿದ್ದಾರೆ. ಈ ಮೂಲಕ ಮಹಿಳಾ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
