ಐಸಿಸಿ ರ್ಯಾಂಕಿಂಗ್ನಲ್ಲಿ ಸ್ಮೃತಿ ಮಂಧಾನ 1 ಟು 3
ICC Rankings: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹಿಳಾ ಬ್ಯಾಟರ್ಗಳ ನೂತನ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾದ ಏಕೈಕ ಬ್ಯಾಟರ್ ಸ್ಮೃತಿ ಮಂಧಾನ. ಭಾರತ ತಂಡದ ಆರಂಭಿಕ ಆಟಗಾರ್ತಿ ಟಿ20 ಹಾಗೂ ಏಕದಿನ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Updated on:Jul 02, 2025 | 2:54 PM

ಐಸಿಸಿ ಮಹಿಳಾ ಬ್ಯಾಟರ್ಗಳ ನೂತನ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಈ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಟಾಪ್-3 ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಟಿ20 ಹಾಗೂ ಏಕದಿನ ಬ್ಯಾಟರ್ಗಳ ಪಟ್ಟಿಯಲ್ಲೂ ಅಗ್ರ ಮೂರಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ್ತಿ ಸ್ಮೃತಿ ಮಂಧಾನ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಸ್ಮೃತಿ ಮಂಧಾನ ಇದೀಗ ಮಹಿಳಾ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಸ್ಮೃತಿ ಮೂರನೇ ಸ್ಥಾನಕ್ಕೇರಿದ್ದಾರೆ. ಒಟ್ಟು 771 ಅಂಕಗಳನ್ನು ಪಡೆದಿರುವ ಸ್ಮೃತಿ ಮುಂದಿನ ಮ್ಯಾಚ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ದ್ವಿತೀಯ ಸ್ಥಾನಕ್ಕೇರಬಹುದು.

ಮತ್ತೊಂದೆಡೆ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸ್ಮೃತಿ ಮಂಧಾನ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 727 ಅಂಕಗಳನ್ನು ಪಡೆದಿರುವ ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಲಾರಾ ವೋಲ್ವಾರ್ಡ್ 725 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಸ್ಮೃತಿ ಮಂಧಾನ ಅವರನ್ನು ಹೊರತುಪಡಿಸಿ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಏಕದಿನ ಹಾಗೂ ಟಿ20 ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಈ ಮೂಲಕ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಪಾರುಪತ್ಯ ಮೆರೆದ ಭಾರತದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಸ್ಮೃತಿ ತಮ್ಮದಾಗಿಸಿಕೊಂಡಿದ್ದಾರೆ.

ಸದ್ಯ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿರುವ ಸ್ಮೃತಿ ಮಂಧಾನ ಮುಂದಿನ ಮೂರು ಮ್ಯಾಚ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ, ಆಸ್ಟ್ರೇಲಿಯಾದ ಬೆತ್ ಮೂನಿ (794) ಹಾಗೂ ವೆಸ್ಟ್ ಇಂಡೀಸ್ನ ಹೇಲಿ ಮ್ಯಾಥ್ಯೂಸ್ (774) ಅನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಬಹುದು. ಹೀಗಾಗಿ ಆಂಗ್ಲರ ವಿರುದ್ಧದ ಸರಣಿಯು ಸ್ಮೃತಿ ಪಾಲಿಗೆ ತುಂಬಾ ಮಹತ್ವದ್ದಾಗಿ ಮಾರ್ಪಟ್ಟಿದೆ.
Published On - 2:54 pm, Wed, 2 July 25
