ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇದೀಗ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ತನ್ನ ಆರನೇ ಪಂದ್ಯದಲ್ಲಿ ಆರ್ಸಿಬಿ ಯುಪಿ ವಾರಿಯರ್ಸ್ ವಿರುದ್ಧ ಜಯ ಸಾಧಿಸಿದೆ.
ನೇವಿ ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಡಬ್ಲ್ಯೂಪಿಎಲ್ 2023ರ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ರಾಯಲ್ ಚಾಲೆಂಜರ್ಸ್ ಯುಪಿ ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಬೀಗಿತು. ಚೊಚ್ಚಲ ಗೆಲುವನ್ನು ಸಂಭ್ರಮಿಸಿದ ನಾಯಕಿ ಸ್ಮೃತಿ ಮಂಧಾನ ಏನು ಹೇಳಿದರು ನೋಡಿ.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಸ್ಮೃತಿ ಮಂಧಾನ, ನಾವು ಏಳನೇ ಓವರ್ನಲ್ಲಿ ಕೆಲ ಪ್ರಮುಖ ವಿಕೆಟ್ ಕಳೆದುಕೊಂಡೆವು. ಆಗ ನಿಜಕ್ಕೂ ಆತಂಕವಾಗಿತ್ತು. ಆದರೆ, ನಂತರ ರಿಚಾ ಘೋಷ್ ಹಾಗೂ ಕನಿಕಾ ಅಹುಜಾ ಆಡಿದ ಆಟ ಅದ್ಭುತವಾಗಿತ್ತು ಎಂದು ಮಂಧಾನ ಹೇಳಿದ್ದಾರೆ.
ಮುಖ್ಯವಾಗಿ ಕನಿಕಾ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ತಂಡಕ್ಕೆ ಮುಖ್ಯ ಕೊಡುಗೆ ನೀಡಿದ್ದಾರೆ. ಅವರು 360 ಡಿಗ್ರಿ ಪ್ಲೇಯರ್. ಭಾರತೀಯ ಕ್ರಿಕೆಟ್ನಲ್ಲಿರುವ ಅಪರೂಪದ ಆಟಗಾರ್ತಿ - ಸ್ಮೃತಿ ಮಂಧಾನ.
ನಾವು ಉತ್ತಮ ಸ್ಥಿತಿಯಲ್ಲಿ ಇಲ್ಲದಿದ್ದಾಗ ನೆರೆದಿದ್ದ ಅಭಿಮಾನಿಗಳು ನಮಗೆ ಸಪೋರ್ಟ್ ಮಾಡಿದ್ದಾರೆ. ಈ ಅಭಿಮಾನ ಕಂಡು ಖುಷಿಯಾಗಿದೆ. ಐದು ಪಂದ್ಯಗಳಲ್ಲಿ ಸೋತ ಬಳಿಕ ಒಂದು ತಂಡಕ್ಕೆ ಈರೀತಿಯ ಬೆಂಬಲ ಸಿಗುವುದಿಲ್ಲ. ಆದರೆ, ಅಭಿಮಾನಿಗಳನ್ನು ನಮ್ಮನ್ನು ಕೈಬಿಡದೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಮಂಧಾನ ಹೇಳಿದ್ದಾರೆ.
ಈ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ಮಧ್ಯದಲ್ಲಿ ಕಿರಣ್ ನವ್ಗಿರೆ (22), ಗ್ರೇಸ್ ಹ್ಯಾರಿಸ್ (46) ಮತ್ತು ಉಪನಾಯಕಿ ದೀಪ್ತಿ ಶರ್ಮಾ (22) ದಿಟ್ಟ ಆಟವಾಡಿದರು. ಪರಿಣಾಮ 19.3 ಓವರ್‌ಗಳಲ್ಲಿ ವಾರಿಯರ್ಸ್ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡರೂ 135 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತ್ತು.
ಆರ್ಸಿಬಿ ಪರ ಎಲಿಸ್ಸಾ ಪೆರಿ 4 ಓವರ್‌ಗಳಲ್ಲಿ ಕೇವಲ 16 ರನ್ ಮಾತ್ರ ಕೊಟ್ಟು 3 ವಿಕೆಟ್ ಉರುಳಿಸಿದರು. ಸೋಫಿ ಡಿವೈನ್ ಎರಡು ವಿಕೆಟ್ ಪಡೆದರೆ, ಸ್ಪಿನ್ನರ್ ಆಶಾ ಶೋಭನಾ ಕೂಡ ಎರಡು ವಿಕೆಟ್ ಕಿತ್ತು ಮಿಂಚಿದರು.
ಗೆಲುವಿನ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 14 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಆರ್ಸಿಬಿ ಆಘಾತ ಅನುಭವಿಸಿತ್ತು. ಸೋಫಿ ಡಿವೈನ್ (14) ಮತ್ತು ನಾಯಕಿ ಸ್ಮೃತಿ ಮಂಧಾನ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ, ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿಯ ಹೀದರ್ ನೈಟ್ (24), ಕನಿಕಾ ಅಹುಜಾ (46) ಹಾಗೂ ರಿಚಾ ಘೋಷ್ (31 ಅಜೇಯ) ರನ್ ಕಲೆಹಾಕಿದ ಪರಿಣಾಮ ಆರ್ಸಿಬಿ ತಂಡ ಗೆಲುವು ಸಾಧಿಸಿತು. ಬೆಂಗಳೂರು ತಂಡ 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಯುಪಿ ಪರವಾಗಿ ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.
Published On - 8:09 am, Thu, 16 March 23