
ಭಾರತದಲ್ಲಿ ನಡೆದ 2025 ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಸಂತಸದ ಅಲೆಯಲ್ಲಿ ತೇಲುತ್ತಿದೆ. ಆದರೆ ಇಡೀ ಟೂರ್ನಿಯಲ್ಲಿ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದ ಸ್ಮೃತಿ ಮಂಧಾನಗೆ ಐಸಿಸಿ ಕಡೆಯಿಂದ ದೊಡ್ಡ ಆಘಾತ ಎದುರಾಗಿದೆ. ವಿಶ್ವಕಪ್‌ನಲ್ಲಿ ತಂಡದ ಪರ ಅತ್ಯಧಿಕ ರನ್ ಬಾರಿಸಿದ್ದ ಸ್ಮೃತಿ ಮಂಧಾನ ಇದೀಗ ಏಕದಿನ ರ್ಯಾಂಕಿಂಗ್ನಲ್ಲಿ ನಂಬರ್ 1ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಮಂಧಾನ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ತಮ್ಮ ನಂಬರ್ 1 ಶ್ರೇಯಾಂಕವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಶತಕ ಬಾರಿಸಿದ್ದ ದಕ್ಷಿಣ ಆಫ್ರಿಕಾದ ನಾಯಕಿ ಲೌರಾ ವೋಲ್ವಾರ್ಡ್ಟ್ ಮಂಧಾನಾ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.

ಮಹಿಳಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದ ಲೌರಾ ವೋಲ್ವಾರ್ಡ್ಟ್ ಇಡೀ ಟೂರ್ನಿಯಲ್ಲಿ 571 ರನ್ ಬಾರಿಸಿದ್ದರು. ಇದರ ಫಲವಾಗಿ ಅವರಿಗೆ ವಿಶ್ವದ ನಂ. 1 ಏಕದಿನ ಬ್ಯಾಟರ್ ಪಟ್ಟ ಸಿಕ್ಕಿದೆ. ಇದರ ಜೊತೆಗೆ ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ (814) ಪಡೆದುಕೊಂಡಿರುವ ವೋಲ್ವಾರ್ಡ್ ಇತರ ಇಬ್ಬರು ಬ್ಯಾಟರ್ಗಳನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.

ವೋಲ್ವಾರ್ಡ್ಟ್, ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದು ಮಾತ್ರವಲ್ಲದೆ ಐಸಿಸಿಯ ಅತ್ಯುತ್ತಮ ವಿಶ್ವಕಪ್ ತಂಡದ ನಾಯಕಿಯಾಗಿಯೂ ಆಯ್ಕೆಯಾದರು. ಮಹಿಳಾ ವಿಶ್ವಕಪ್‌ನಲ್ಲಿ ವೋಲ್ವಾರ್ಡ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ,, ಆಡಿದ ಒಂಬತ್ತು ಪಂದ್ಯಗಳಲ್ಲಿ 71.37 ಸರಾಸರಿಯಲ್ಲಿ 571 ರನ್ ಗಳಿಸಿದ್ದರು. ಇದರಲ್ಲಿ ಎರಡು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿದ್ದವು.

ಇದರ ಜೊತೆಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು (73, ಮತ್ತು ಏಳು ಸಿಕ್ಸರ್‌ಗಳು) ಬಾರಿಸಿದ್ದರು. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿದ್ದರು. ಇದರ ಪರಿಣಾಮವಾಗಿ ಅವರಿಗೆ ನಂ.1 ಸ್ಥಾನ ಸಿಕ್ಕಿದ್ದರೆ, ಇದೀಗ ಎರಡನೇ ಸ್ಥಾನಕ್ಕೆ ಕುಸಿದಿರು ಮಂಧಾನ 811 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ.

ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ ಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗ್ಸ್ ಟಾಪ್ 10 ಪಟ್ಟಿಗೆ ಪ್ರವೇಶಿಸಿದ್ದು, 10 ನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳಲ್ಲಿ, ದಕ್ಷಿಣ ಆಫ್ರಿಕಾದ ಮರಿಜಾನ್ನೆ ಕಪ್ಪ್ ಇಬ್ಬರು ಆಟಗಾರ್ತಿಯರನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ತಲುಪಿದ್ದಾರೆ, ಇಂಗ್ಲೆಂಡ್‌ನ ಎಕ್ಲೆಸ್ಟೋನ್ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ದೀಪ್ತಿ ಶರ್ಮಾ 5 ನೇ ಸ್ಥಾನದಲ್ಲಿದ್ದಾರೆ. ಇದರೊಂದಿಗೆ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಶರ್ಮಾ ಒಂದು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ, ಆಶ್ಲೀ ಗಾರ್ಡ್ನರ್ 1 ನೇ ಸ್ಥಾನದಲ್ಲಿದ್ದಾರೆ.