Updated on: Oct 13, 2022 | 1:36 PM
ಸೌರವ್ ಗಂಗೂಲಿ ಅವರನ್ನು ಟೀಂ ಇಂಡಿಯಾದ ದುರಂತ ನಾಯಕ ಎಂದು ಹೇಳಿದರೆ ತಪ್ಪಾಗಲಾರದು. ತಂಡದಲ್ಲಿ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡಿ ಭವಿಷ್ಯದ ಟೀಂ ಇಂಡಿಯಾವನ್ನು ಕಟ್ಟಿದ ಹೆಮ್ಮೆಯ ನಾಯಕ ಎಂಬ ಬಿರುದ್ಧು ಗಂಗೂಲಿಗಿದ್ದರೂ, ಬಿಸಿಸಿಐ ಅವರನ್ನು ನಡೆಸಿಕೊಂಡ ರೀತಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. ನಾಯಕತ್ವದಿಂದ ಹೊರಗಿಡುವುದರ ಜೊತೆಗೆ ತಂಡದಿಂದ ಕೈಬಿಟ್ಟಿದ್ದು, ಕೋಚ್ ಜೊತೆ ವಿವಾದ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಾಯ. ಹೀಗೆ ಗಂಗೂಲಿ ವೃತ್ತಿಜೀವನದಲ್ಲಿ ಅವರಿಗೆ ಅನಿರೀಕ್ಷಿತವಾಗಿ ಆಘಾತ ನೀಡಿದ ಪ್ರಮುಖ 5 ಘಟನೆಗಳ ವಿವರ ಹೀಗಿದೆ.
ಈ 5 ಅನಿರೀಕ್ಷಿತ ಆಘಾತಗಳಲ್ಲಿ ಮೊದಲ ಆಘಾತವೆಂದರೆ ಗಂಗೂಲಿ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದಾಗಿದೆ. 2005 ರಲ್ಲಿ ಸೌರವ್ ಗಂಗೂಲಿ ಅವರಿಂದ ತಂಡದ ನಾಯಕತ್ವವನ್ನು ಕಿತ್ತುಕೊಳ್ಳಲಾಯಿತು. ಇದರಿಂದಾಗಿ ಗಂಗೂಲಿ ತುಂಬಾ ನಿರಾಶೆಗೊಂಡಿದ್ದರು.
ಗಂಗೂಲಿ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್ ಅಂದರೆ ಅದು ಅಂದಿನ ಕೋಚ್ ಗ್ರೆಗ್ ಚಾಪೆಲ್ ಜತೆಗಿನ ವಿವಾದ. 2007ರಲ್ಲಿ ಟೀಂ ಇಂಡಿಯಾದ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಹಾಗೂ ಗಂಗೂಲಿ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ಇದಾದ ನಂತರ ಗಂಗೂಲಿ ಕೋಚ್ ಹಾಗೂ ಬಿಸಿಸಿಐ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದ್ದರು.
ಈ ಘಟನೆಯ ಬಳಿಕ ತಂಡದಲ್ಲಿದ್ದರೂ ಕಳಪೆ ಪ್ರದರ್ಶನ ನೀಡುತ್ತಿದ್ದ ಸೌರವ್ ಗಂಗೂಲಿ ಅವರನ್ನು 2008 ರಲ್ಲಿ ಇದಕ್ಕಿದಂತೆ ನಿವೃತ್ತಿ ತೆಗೆದುಕೊಳ್ಳಲು ಒತ್ತಾಯಿಸಲಾಯಿತು. ಮಂಡಳಿಯ ಈ ಒತ್ತಾಯದಿಂದ ಗಂಗೂಲಿ ತುಂಬಾ ಕೋಪಗೊಂಡಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಗಂಗೂಲಿ ಮುನ್ನಡೆಸುತ್ತಿದ್ದರು. ಆದರೆ 2010 ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಪ್ರದರ್ಶನ ನೀಡದ ಕಾರಣ ಸೌರವ್ ಗಂಗೂಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು.
ಇಷ್ಟೆಲ್ಲ ಆಘಾತಗಳ ನಡುವೆ ಬಿಸಿಸಿಐ ಅಧ್ಯಕ್ಷ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸೌರವ್ ಗಂಗೂಲಿಯನ್ನು ಇದೀಗ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಗಂಗೂಲಿ ಬಿಸಿಸಿಐನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಬಯಕೆಯಿದ್ದರೂ ಮಂಡಳಿಯ ಇತರ ಸದಸ್ಯರು ಇದಕ್ಕೆ ಆಕ್ಷೇಪ ಹೊರಹಾಕಿದ್ದು, ಅವರನ್ನು ಈ ಸ್ಥಾನದಿಂದ ಕೆಳಗಿಳಿಸುವಂತೆ ಒತ್ತಡ ಹೇರಿದ್ದಾರೆ.